ಔರಾದ: ತಾಲ್ಲೂಕಿನಲ್ಲಿ 34.49 ಕೋಟಿ ಅನುದಾನದಲ್ಲಿ ಸಂಯೋಜಿತ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಬೀದರ ಜಿಲ್ಲೆಯಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವಿದೆ. ಆದರೆ ಸ್ಥಳೀಯ ರೈತರ ಆದ್ಯತೆಗಳನ್ನು ಪೂರೈಸಲು ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪಿಸಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಈ ಕುರಿತಂತೆ ವಿಸ್ತೃತ ಯೋಜನೆಯನ್ನು ತಯಾರಿಸಿ ಅದರ ಅನುಷ್ಠಾನಕ್ಕಾಗಿ ಕಾರ್ಯಪ್ರವೃತ್ತನಾಗಿದ್ದೆ. ಇದೀಗ ಸಚಿವ ಸಂಪುಟದಿಂದಲೂ ಅನುಮೋದನೆ ಸಿಕ್ಕಿರುವುದರಿಂದ ಕ್ಷೇತ್ರದಲ್ಲಿ ಶೀಘ್ರದಲ್ಲೇ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಯಾಗಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಈ ಕೇಂದ್ರ ಸಾಕಷ್ಟು ಸಹಾಯವಾಗಲಿದೆ ಎಂದಿದ್ದಾರೆ.
ಜಾನುವಾರು ಸಂವರ್ಧನಾ ಕೇಂದ್ರ ನಿರ್ಮಾಣಕ್ಕಾಗಿ ಈಗಾಗಲೇ ಔರಾದ ತಾಲ್ಲೂಕಿನ ಹೆಡಗಾಪೂರ ಗ್ರಾಮದ ಸರ್ವೇ ನಂ.26ರಲ್ಲಿ 33 ಎಕರೆ ಸರ್ಕಾರಿ ಜಮೀನನ್ನು ಕಾಯ್ದಿರಿಸಲಾಗಿದೆ. ನಬಾರ್ಡ ನೆರವಿನೊಂದಿಗೆ ರಾಜ್ಯ ಸರ್ಕಾರದಿಂದ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದರಿ ಕೇಂದ್ರದಲ್ಲಿ ದೇವಣಿ, ರೆಡ್ ಖಂದಾರಿ ದನಗಳು ಹಾಗೂ ಮರ‍್ರಾ ಎಮ್ಮೆ ತಳಿಗಳ ಸಂವರ್ಧನಾ ಕೇಂದ್ರ, ಆಧುನಿಕ ಯಾಂತ್ರೀಕೃತ ಹಂದಿ ಸಂವರ್ಧನಾ ಕೇಂದ್ರ, ಕೋಳಿ ಸಂವರ್ಧನಾ ಕೇಂದ್ರ, ಕೆಂಗುರಿ ಕುರಿ ತಳಿ ಮತ್ತು ಉಸ್ಮಾನಬಾದಿ ಮೇಕೆ ತಳಿ ಸಂವರ್ಧನಾ ಕೇಂದ್ರ ಮತ್ತು ರೈತರ ತರಬೇತಿ ಕೇಂದ್ರಗಳು ಇರಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಂಯೋಜಿತ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ ಸ್ಥಾಪಿಸುವುದರಿಂದ ಈ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ರೈತರನ್ನು ಉತ್ತೇಜಿಸಿ ತರಬೇತಿ ಪಡೆಯುವ ರೈತರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಜಾನುವಾರು ಮತ್ತು ಕೋಳಿ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸಬಹುದು. ಹಾಗೆಯೇ ಜಾನುವಾರು ಮತ್ತು ಕೋಳಿ ಸಾಕಾಣಿಕೆಯನ್ನು ಉಪ ಕಸುಬನ್ನಾಗಿ ತೆಗೆದುಕೊಳ್ಳಲು ರೈತರನ್ನು ಉತ್ತೇಜಿಸಿ, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಔರಾದ ತಾಲ್ಲೂಕಿನಲ್ಲಿ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರ ಸ್ಥಾಪನೆಯಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೂ ಔರಾದ ಮಹಾಜನತೆಯ ಪರವಾಗಿ ಸಚಿವ ಪ್ರಭು.ಬಿ ಚವ್ಹಾಣ ಅವರು ಧನ್ಯವಾದ ಸಲ್ಲಿಸಿದ್ದಾರೆ.