ಔರಾದ: ಮಣ್ಣಿನ ಫಲವತ್ತೆತ ಮತ್ತು ಗುಣಧರ್ಮಗಳನ್ನು ತಿಳಿಯಲು ರೈತರು ಕಡ್ಡಾಯವಾಗಿ ತಮ್ಮ ಹೋಲದಲ್ಲಿರುವ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ತಾಲುಕು ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ಪಾಂಡುರಂಗ ಪಾಟೀಲ್ ಹೇಳಿದರು.
ತಾಲೂಕಿನ ಬಾದಲಗಾಂವ್ ದಲ್ಲಿ ತಾಲೂಕು ಕೃಷಿ ಇಲಾಖೆ, ರಿಲಯನ್ಸ್ ಫೌಂಡೇಷನ್ ಬೀದರ್ ಹಾಗು ಔಟ್ ರೀಚ್ ಸಂಸ್ಥೆಗಳ ಸಹಯೋಗದಲ್ಲಿ ಮಣ್ಣು ಪರೀಕ್ಷೆ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗಲೆಂದು ನುರಿತ ತಜ್ಞರ ತಂಡದೊಂದಿಗೆ ರೈತರ ಜಮೀನಿಗೆ ತೆರಳಿ ಮಣ್ಣಿನ ಪರೀಕ್ಷೆ ಮಾಡಿಸುವ ಸೌಲಭ್ಯ ನೀಡಲಾಗಿದೆ. ಆದುದರಿಂದ ರೈತರುಗಳು ಇದರ ಹೆಚ್ಚಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಣ್ಣು ಪರೀಕ್ಷೆ ತಾಂತ್ರಿಕ ಸಹಾಯಕ ಸಂಗಮೇಶ ಖಾನಪೂರ ಮಾತನಾಡಿ, ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಂಡುಬಂದರೇ ಇಳುವರಿಯಲ್ಲಿ ಕುಂಠಿತವಾಗುತ್ತದೆ. ಹೀಗಾಗಿ ವೈಜ್ಞಾನಿಕವಾಗಿ ಪೋಷಕಾಂಶಗಳ ಸಮಗ್ರ ನಿರ್ವಹಣೆ ಮತ್ತು ಸೂಕ್ತ ನೀರಾವರಿ ಪದ್ದತಿ ಅಳವಡಿಕೆಗಾಗಿ ಮಣ್ಣು ಪರೀಕ್ಷೆ ಮಾಡಿಸುವುದು ಅತ್ಯಗತ್ಯವಾಗಿದೆ ಎಂದರು. ಸಂಪನ್ಮೂಲವ್ಯಕ್ತಿ ಮಲ್ಲಪ್ಪ ಗೌಡಾ ಮಾತನಾಡಿ, ಮನುಷ್ಯನ ಆರೋಗ್ಯ ಪರೀಕ್ಷೆ ಮಾಡಿಸುವ ರೀತಿಯಲ್ಲಿಯೇ ಮಣ್ಣಿನ ಆರೋಗ್ಯದ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ. ಮಣ್ಣಿನ ಪರೀಕ್ಷೆ ಮಾಡಿಸುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಯಾವ ರೀತಿಯ ಪೋಷಕಾಂಶಗಳ ಕೊರತೆ ಇದೆ ಅನ್ನುವುದು ನಿಖರವಾಗಿ ಕಂಡುಕೊಳ್ಳಬಹುದೆಂದರು. ಈ ಸಂದರ್ಭದಲ್ಲಿ ಶಿವಕುಮಾರ್ ಬಿರಾದರ್, ಇರ್ಫಾನ್ , ಪ್ರಕಾಶ, ರಾಹುಲ್ ರಾಠೋಡ್, ಸಂತೋಷ ಸೇರಿದಂತೆ ಇತರರಿದ್ದರು.