ಔರಾದ: ಪ್ರತಿಯೊಬ್ಬರಲ್ಲಿ ಅದ್ಭುತ ಶಕ್ತಿ ಇರುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಿಸುವ ಛಲ ಇಟ್ಟುಕೊಂಡ ಕೆಲಸ ಮಾಡಿದರೆ ಖಂಡಿತವಾಗಿ ಸಾಧಿಸಬಹುದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು ಹೇಳಿದರು.
ತಾಲೂಕಿನ ಸಂತಪುರ್ ಅನುಭವ ಮಂಟಪ ಗುರುಕುಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣದ ಜೊತೆಗೆ ಆಧುನಿಕ ಯುಗದಲ್ಲಿ ಸಂಸ್ಕೃತಿಯು ಬಹು ಮುಖ್ಯ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದಲೇ ಏನಾದರೂ ಸಾಧಿಸಬಹುದು. ಶಿಕ್ಷಕರು ಮತ್ತು ಪಾಲಕರು ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸುವುದರಿಂದ ಮಕ್ಕಳು ತಮ್ಮ ಭವಿಷ್ಯವನ್ನು ಸರಿಯಾಗಿ ರೂಪಿಸಿಗೊಳ್ಳಲಿದ್ದಾರೆ ಎಂದು ಹೇಳಿದರು.
ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಮಹ್ಮದ್ ಮಕ್ಸುದ್ ಮಾತನಾಡಿ, ಭಾಲ್ಕಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ನೈತಿಕತೆ, ಮುಂತಾದವುಗಳ ಮೂಲಕ ಒಳ್ಳೆಯ ಸಮಾಜ ನಿರ್ಮಾಣ ಮಾಡುವುದರಲ್ಲಿ ಪೂಜ್ಯಶ್ರೀಗಳ ಪಾತ್ರ ಬಹುಮುಖ್ಯವಾಗಿದೆ. ಹಾಗಾಗಿ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ಹೇಳಿದರು.
ಔರಾದ ತಾಲ್ಲೂಕ ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಂಜೀವಕುಮಾರ ಜುಮ್ಮಾ ಮಾತನಾಡಿ, ಕಾಲಕ್ಕೆ ತಕ್ಕಂತೆ ಬದಲಾಗಬೇಕು.ಇದು ಪ್ರಕೃತಿ ನಿಯಮವಾಗಿದೆ. ಹಾಗಾಗಿ ಭಾಲ್ಕಿ ಹಿರೇಮಠ ಸಂಸ್ಥಾನ ಶಿಕ್ಷಣ, ಸಾಂಸ್ಕೃತಿಕ ಪರಂಪರೆ ಉಳಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳ ಪ್ರೋತ್ಸಾಹ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹಿರೇಮಠ ಸಂಸ್ಥಾನ ವಿದ್ಯಾಪೀಠ ನಿರ್ದೇಶಕ ಶಶಿಧರ್ ಕೋಶಂಬೇ, ಔರಾದ್ ಬಿಆರ್‌ಪಿ ಜಗದೀಶ್ ನಿಂಬುರೆ ಮಾತನಾಡಿದರು. ಸಂತಪುರ್ ಸಿಆರ್‌ಸಿ ಜ್ಯೋತಿ ಜೀರಿಗೆ ಪಾಲಕರ ಪ್ರತಿನಿಧಿ ಸುನೀಲ ಪಾಟೀಲ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಪಾಲಕರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.