ಔರಾದ : ಶಿಕ್ಷಣ ದೇಶದ ಅಭಿವೃದ್ಧಿಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದ್ದು,ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಔರಾದ(ಬಿ), ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಸಹಭಾಗಿತ್ವದಲ್ಲಿ ಸೋಮವಾರ ಠಾಣಾಕುಶನೂರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ರೀತಿಯಲ್ಲಿಯೇ ಅಭಿವೃದ್ಧಿಪಡಿಸಲಾಗಿತ್ತಿದೆ. ಎಲ್ಲ ಶಾಲೆಗಳಲ್ಲಿ ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಶಾಲೆಯ ಅಭಿವೃದ್ಧಿಗಾಗಿ ಯಾವುದೇ ರೀತಿಯ ಬೇಡಿಕೆಗಳಿದ್ದರೂ ತಮ್ಮನ್ನು ನೇರವಾಗಿ ಭೇಟಿಯಾಗಿ ಮನವಿ ಸಲ್ಲಿಸಬಹುದು. ಆದ್ಯತೆಯ ಮೇರೆಗೆ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು, ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಯುವಕರ ಕೈಗೆ ಉದ್ಯೋಗ ನೀಡುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇನೆ. ರಸ್ತೆಗಳು, ಕುಡಿಯುವ ನೀರು, ವಿದ್ಯುತ್ ಪೂರೈಕೆ ಒಳಗೊಂಡು ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವಶ್ಯಕತೆಯಿರುವ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ ಎಂದರು.
ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳು ಮಕ್ಕಳನ್ನು ಕ್ರಿಯಾಶೀಲಗೊಳಿಸಲು ಸಹಕಾರಿಯಾಗಿವೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಚನ್ನಾಗಿ ಅಭ್ಯಾಸ ಮಾಡಬೇಕು. ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಫಲಿತಾಂಶ ಸುಧಾರಣೆಗಾಗಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬಹುಮಾನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಂತಹ ನಾನಾ ರೀತಿಯಿಂದ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಂದ ಉತ್ತೀರ್ಣರಾಗಲು ಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಮದನೂರ ಶಾಲೆಯ ಚನ್ನಬಸವ ಸಂತೋಷಕುಮಾರ, ಕೌಡಗಾಂವ ಶಾಲೆಯ ಪ್ರೀಯಾ ಸಂಜುಕುಮಾರ, ದೇಶಮುಖ ವಡಗಾಂವ ಶಾಲೆಯ ಕೃಷ್ಣ ತುಕಾರಾಮ ಅವರಿಗೆ ಲ್ಯಾಪ್‌ಟಾಪ್ ವಿತರಿಸಿ, ಅವರ ಪೋಷಕರು ಮತ್ತು ಶಾಲೆಯ ಮುಖ್ಯ ಗುರುಗಳಿಗೆ ಸನ್ಮಾನಿಸಲಾಯಿತು.
ಠಾಣಾಕುಶನೂರ ಕೆಪಿಎಸ್ ಪ್ರಾಚಾರ್ಯ ವೈಜಿನಾಥ ಕಾಳೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾಜಿರಾವ ಕಾಳೆ, ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಧನರಾಜ, ಉಪಾಧ್ಯಕ್ಷ ಬಂಡೆಪ್ಪ ಶಿವರಾಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಡಿ ಮಕ್ಸೂದ್, ಶಿವಕುಮಾರ ಘಾಟೆ, ಮುಖಂಡರಾದ ವಸಂತ ಬಿರಾದಾರ, ದೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ರಾಮಶೆಟ್ಟಿ ಪನ್ನಾಳೆ ಸೇರಿದಂತೆ ಪಂಚಾಯತಿಯ ಅಧಿಕಾರಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.