ಔರಾದ್: ವಿದ್ಯಾರ್ಥಿಗಳು ಕಲಿಕೆಯ ಜೊತೆಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಗೂ ಒತ್ತು ಕೊಡುವುದು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವುದು ಎಂದು ಪ್ರಾಂಶುಪಾಲ ಓಂ ಪ್ರಕಾಶ ದಡ್ಡೆ ನುಡಿದರು.
ಸಂತಪೂರಿನ ಜನತಾ ಪ್ರವೀಣ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ನಾಲ್ಕು ಗೋಡೆಯ ನಡುವೆ ನಿಗದಿತ ಪಾಠ-ಪ್ರವಚನ ಕೇಳಿಕೊಂಡು ಕಲಿಯುವುದರ ಜತೆಗೆ, ಸುತ್ತಲೂ ಸಮಾಜದ ಜನರೊಂದಿಗೆ ಬೆರೆತು ಅವರ ನೋವು-ನಲಿವು, ಕಷ್ಟ- ಸುಖ, ಕಷ್ಟ-ಕಾರ್ಪಣ್ಯಗಳಲ್ಲಿ ಪಾಲ್ಗೊಂಡು, ವೈಯಕ್ತಿಕ, ಸಾಮಾಜಿಕ ಬೆಳವಣಿಗೆಗೆ ಹಾಗೂ ರಾಷ್ಟ್ರಾಭಿವೃದ್ಧಿಗೆ ಕಾರಣರಾಗಬೇಕು ಎಂಬುದೇ ರಾಷ್ಟ್ರೀಯ ಸೇವಾ ಯೋಜನೆಯ ಆಶಯವಾಗಿದೆ ಎಂದರು.
ಝೆಡ್.ಬಿ.ಬೆಲ್ದಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರ ಭಕ್ತಿ, ಸಹಬಾಳ್ವೆ, ಸೋದರತ್ವದ ಪರಿಕಲ್ಪನೆಗಳನ್ನು ಆಳವಾಗಿ ಮೂಡಿಸಲು ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ವಿಶೇಷ ತರಬೇತಿಗಳು, ರಕ್ತದಾನ ಶಿಬಿರಗಳನ್ನು ಎನ್‌ಎಸ್‌ಎಸ್‌ನಲ್ಲಿ ಆಯೋಜಿಸಲಾಗುತ್ತದೆ. ಬೇರೆ ಬೇರೆ ಜಾತಿ- ಧರ್ಮ-ಸಂಸ್ಕೃತಿ-ಊರಿನ ಮಕ್ಕಳು ವಿಶೇಷ ಶಿಬಿರಗಳಲ್ಲಿ ಜತೆಗೂಡಿ ದುಡಿದು ಬೇಯಿಸಿ ತಿನ್ನುವುದರಿಂದ ಈ ಸಹಬಾಳ್ವೆ ಸೋದರತ್ವದ ಅನುಭೂತಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಾಹಿತಿ ಪರಮೇಶ ವಿಳಸಪೂರೆ ಮಾತನಾಡಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುವುದರಿಂದ ಮಾನವೀಯ ಸಂಬಂಧಗಳು ಗಟ್ಟಿಯಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಯಾಗುತ್ತದೆ, ಪ್ರಜಾ ಪ್ರಭುತ್ವದಲ್ಲಿ ನಿಸ್ವಾರ್ಥ ಸೇವೆ, ಸಹಬಾಳ್ವೆ ಮತ್ತು ಸೋದರತ್ವಗಳಿಗೆ ಇರುವ ಮಹತ್ವವನ್ನು ಇದು ಸಾರಿ ಹೇಳುತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶಿವರಾಜ ಜುಕಾಲೆ, ಶಿಬಿರದ ಮೇಲ್ವಿಚಾರಕಿ ಅನಿತಾ ಆಲೂರೆ, ವಿಜಯಕುಮಾರ ಗಾಯಕವಾಡ ಉಪನ್ಯಾಸಕರಾದ ರಮೇಶ ಪವಾರ್, ಗಣೇಶ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.