ಔರಾದ್: ಪ್ರಸ್ತುತ ಇರುವ ವ್ಯವಸ್ಥೆಯನ್ನು ಹಲವು ಸುಧಾರಣೆಗಳ ಮೂಲಕ ನೂತನ ಶಿಕ್ಷಣ ನೀತಿ ಸಂಪೂರ್ಣ ಬದಲಿಸಲಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ನುಡಿದರು.
ತಾಲೂಕಿನ ಬಾದಲಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ವಿಶಿಷ್ಟ ಬದಲಾವಣೆಗಳು ಆಗಲಿದ್ದು, ಮಕ್ಕಳು ಪ್ರಸ್ತುತ ಕಾಲಕ್ಕೆ ತಕ್ಕಂತೆ ಎಲ್ಲ ರೀತಿಯಲ್ಲಿ ಪ್ರಗತಿ ಸಾಧಿಸಲಿದ್ದಾರೆ.
ಆಧುನಿಕತೆಯ ಎಲ್ಲ ಅಂಶಗಳು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಬದುಕಿಗೆ ಅವಶ್ಯಕವಾದ ಕೌಶಲ್ಯಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರವು ಮಹತ್ವದ್ದಾಗಿದ್ದು, ತಂದೆ ತಾಯಂದಿರು ಮಕ್ಕಳಿಗೆ ಹೆಚ್ಚಿನ ಸಮಯ ನೀಡಿ ದೇಶಪ್ರೇಮ, ನ್ಯಾಯ, ಸತ್ಯ, ಪ್ರೀತಿ, ದಯೆ, ಕರುಣೆ ಯಂತಹ ಜೀವನ ಮೌಲ್ಯಗಳ ಸಂಸ್ಕಾರ ತುಂಬವ ಕೆಲಸ ಮಾಡಬೇಕಿದೆ ಎಂದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಡಾ. ಕಲ್ಲಪ್ಪ ಉಪ್ಪ, ಡಾ. ಅನೀಲಕುಮಾರ, ಪಿಡಿಒ ಶರಣಪ್ಪ ಶಿವಾಜಿರಾವ ಪಾಟೀಲ್ ಮುಂಗನಾಳ, ಎಸ್‌ಡಿಎಂಸಿ ಅಧ್ಯಕ್ಷ ರಾಮದಾಸ ಪಾಟೀಲ, ಮುಖ್ಯ ಶಿಕ್ಷಕಿ ಮಾರ್ಥಾಬಾಯಿ ಮಾಳಗೆ, ಪಂಡರಿ ಆಡೆ, ಗಜಾನನ ಮಳ್ಳಾ, ಶಾಲಿವಾನ ಉದಗಿರೆ, ಗೋವಿಂದ ಪಾಟೀಲ, ವೆಂಕಟ ಭಾಲ್ಕಿ, ಬಾಲಾಜಿ ಅಮರವಾಡಿ, ವಿಶ್ವನಾಥ ಗುರಣೆ, ಮಾಧವರಾವ ಭಾಲೇಕರ್, ಸುರೇಶ ಕಾಳೆ, ಪ್ರಭಾವತಿ, ಸುಂದ್ರಮ್ಮ, ಸುಭಾಷ ರೆಡ್ಡಿ, ಗೋವಿಂದ ಜಾಧವ, ಜಗದೇವಿ ಗಡ್ಡೆ ಸೇರಿದಂತೆ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.