ಔರಾದ: ಮಡ್ ಬಾತ್ ಎಂದೇ ಖ್ಯಾತಿ ಆಗಿರುವ ಮಣ್ಣಿನ ಸ್ನಾನವನ್ನು ಮಾಡುವ ಮೂಲಕ ತಾಲೂಕಿನ ಯನಗುಂದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಮಕ್ಕಳು ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ರಸಾಯನಿಕಯುಕ್ತ ಬಣ್ಣಗಳಿಂದ ದೇಹದ ಮೇಲೆ ಪರಿಣಾಮ ಬೀರುತ್ತಿದ್ದು, ನೈಸರ್ಗಿಕವಾಗಿ ದೇಹಕ್ಕೆ ಮುದ ನೀಡುವ ಮಣ್ಣಿನ ಸ್ನಾನವನ್ನು ಯನಗುಂದಾ ಗ್ರಾಮದ ನಾಟಿ ವೈದ್ಯ ಬಸವರಾಜ ಫೂಳೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಸಂತೋಷ, ಮುಸ್ತಾಪುರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಮೀನಿಗೆ ಆಗಮಿಸಿ, ಕೆಸರನ್ನು ಮೈಗೆ ಸವರಿಕೊಂಡು ಸಂಭ್ರಮದೊಂದಿಗೆ ಸ್ನಾನ ಮಾಡಿದರು. ಮಡ್ ಬಾತ್‌ಗಾಗಿಯೇ ಎರಡು ದಿನದ ಹಿಂದೆ ಹುತ್ತಿನ ಮಣ್ಣು ಸಂಗ್ರಹಿಸಿ, ನೀರಿನಲ್ಲಿ ನೆನೆಯಿಸಲಾಗಿತ್ತು. ನೆನೆಸಿದ ಮಣ್ಣನ್ನು ಮಕ್ಕಳು ತುಳಿದು ಮೃದು ಮಾಡಿದರು. ನಂತರ ಪಾದದಿಂದ ಹಿಡಿದು ತಲೆಯವರಿಗೆ ಸವರಿಕೊಂಡು ಬಿಸಿಲಲ್ಲಿ ಕುಳಿತು ಒಣಗಿಸಿಕೊಂಡರು. ಒಣಗಿದ ನಂತರ ಸ್ನಾನ ಮಾಡಿ, ಸಂತಸ ಪಟ್ಟರು.
ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಸಾಹಸ, ಛಲ, ಆತ್ಮವಿಶ್ವಾಸ, ಸೌರ್ಹಾದತೆ, ಸಹಬಾಳ್ವೆ, ಮಾನವೀಯ ಗುಣಗಳು ಬೆಳೆಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ್, ಶಿವಕುಮಾರ, ಮಜಗೆ, ಅಮರ ಮುಕ್ತದಾರ, ದೈಹಿಕ ಶಿಕ್ಷಕ ಪ್ರಶಾಂತಕುಮಾರ ಪಾಟೀಲ, ಸಂತೋಷಕುಮಾರ ಮುಸ್ತಾಪುರೆ ಸೇರಿದಂತೆ ಇತರರಿದ್ದರು.