ಭಾರತ ದೇಶದ ಹೆಮ್ಮೆ ಪುತ್ರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಯಾವ ದೇಶ, ವ್ಯಕ್ತಿ, ಶಕ್ತಿಗೂ ಹೆದರದೆ, ಅಂಜದೆ ದೇಶ ಸ್ವತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಸಂತಪುರ್ ಪಿಎಸ್ಐ ಸಿದ್ದಣ್ಣ ಗಿರಿಗೌಡರ್ ಹೇಳಿದರು.
ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸರ್ಕಾರವು ಸಂಸ್ಕೃತಿ ಸಚಿವಾಲಯ ಮೂಲಕ ನೇತಾಜಿಯವರ 125ನೇ ಜನ್ಮದಿನ ಪ್ರಯುಕ್ತ ಆ ದಿನವನ್ನೇ ಪರಾಕ್ರಮ ದಿವಸ ಎಂದು ಕರೆಯುತ್ತಾರೆ. ತ್ಯಾಗ ಮತ್ತು ಭಾರತ ಸ್ವತಂತ್ರ ಚಳುವಳಿ ಧೈರ್ಯ ದಿನ, ಶೌರ್ಯ ದಿನ ಎಂತಲೂ ನೇತಾಜಿಯವರನ್ನು ಕರೆಯಲಾಗುತ್ತದೆ ಎಂದು ಹೇಳಿದರು. ನಿವೃತ್ತ ಯೋಧ ಹಣಮಂತ ಬುಟ್ಟೆ ಮಾತನಾಡಿ, ತ್ಯಾಗ, ಧೈರ್ಯಗಳ ಸಾಕಾರ ಮೂರ್ತಿ ನೇತಾಜಿ ಅವರಂತೆ ಇಂದಿನ ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ವೆಂಕಟ ಜಾದವ್, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಸುಧಾ ಕೌಟಿಗೆ ಇತರರು ಉಪಸ್ಥಿತರಿದ್ದರು.