ಔರಾದ: ತಾಲ್ಲೂಕಿನ ಚಿಂತಾಕಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲಾ ಕಟ್ಟಡ ನಿರ್ಮಿಸಲು ಸಚಿವ ಸಂಪುಟವು 15 ಕೋಟಿಯ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು .ಬಿ ಚವ್ಹಾಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಬೃಹತ್ (ಮ್ಯಾಕ್ರೋ) ಕ್ರಿಯಾ ಯೋಜನೆಯ ಗಿರಿಜನ ಉಪ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಐದು ವಸತಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ಪ್ರತಿ ವಸತಿ ಶಾಲೆಗೆ 15 ಕೋಟಿಯಂತೆ 75 ಕೋಟಿಯ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಚಿಂತಾಕಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಹಾಗೂ ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಅದರಂತೆ ತಾಲ್ಲೂಕಿನಲ್ಲಿ ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಅವಶ್ಯಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಗಡಿ ಗ್ರಾಮವಾದ ಚಿಂತಾಕಿಯಲ್ಲಿ ಬಾಲಕಿಯರ ವಸತಿ ಶಾಲೆ ನಿರ್ಮಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಸತತ ಪ್ರಯತ್ನ ವಹಿಸಿ ಅನುದಾನ ತಂದಿದ್ದೇನೆ ಎಂದಿದ್ದಾರೆ.
ಚಿಂತಾಕಿಯಲ್ಲಿ ಬಾಲಕಿಯರ ವಸತಿ ಶಾಲೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸುಸಜ್ಜಿತವಾದ ವಸತಿ ಶಾಲೆ ಕಟ್ಟಡ ನಿರ್ಮಿಸುವ ಕೆಲಸವನ್ನು ಶೀಘ್ರ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಶೀಘ್ರ ಕಟ್ಟಡ ನಿರ್ಮಿಸುವ ಕೆಲಸ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಔರಾದ ತಾಲ್ಲೂಕಿನಲ್ಲಿ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿರುವುದಕ್ಕೆ ಕ್ಷೇತ್ರದ ಜನತೆಯ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಪ್ರಭು ಬಿ. ಚವ್ಹಾಣ ಧನ್ಯವಾದ ಸಲ್ಲಿಸಿದ್ದಾರೆ.