ಔರಾದ: ವಿದ್ಯಾರ್ಥಿಗಳು ತಮ್ಮ ಮೌಲ್ಯವಾದ ವಿದ್ಯಾರ್ಥಿ ಜೀವನದ ಹಂತಗಳನ್ನು ಮುಂದೆ ಸುಭದ್ರವಾದ ಸೇತುವೆಯಾಗಿ ನಿಲ್ಲುವಂತೆ ನಿರ್ಮಾಣವಾಗಬೇಕು ಎಂದು ಸಂಪನ್ಮೂಲ ಶಿಕ್ಷಕಿ ನೀಲಗಂಗಾ ಚಿಟ್ಟೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿ, ಛಲ ಹೊಂದಿರಬೇಕು ತಮ್ಮ ತರಗತಿಯಲ್ಲಿ ನಾನೇ ನೂರಕ್ಕೆ- ನೂರು ಅಂಕಗಳನ್ನು ಪಡೆದಿರುತ್ತೇನೆ ಅನ್ನುವ ಭರವಸೆ ನಿಮ್ಮಲ್ಲಿರಬೇಕು ಎಂದು ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಘಾಟೆ ಮಾತನಾಡಿ, ವಿದ್ಯಾರ್ಥಿಗಳೇ ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಎನ್ನುವ ಹಾಗೆ ಇಂದಿನ ವಸತಿ ನಿಲಯದಲ್ಲಿ ಇರುವ ಸೌಲಭ್ಯಗಳು ನಮ್ಮ ಮನೆಗಳಲ್ಲಿ ಸಿಗುವುದಿಲ್ಲ ನಾವುಗಳು ತುಂಬಾ ಕಷ್ಟಗಳಿಂದ ವಿದ್ಯಾಭ್ಯಾಸ ಮಾಡಿದ್ದೇವೆ. ಇಂದಿನ ವಿದ್ಯಾರ್ಥಿಗಳಿಗೆ ತುಂಬಾ ಸೌಲಭ್ಯಗಳು ಸರ್ಕಾರ ನೀಡುತ್ತಿದೆ. ಅದರ ಉಪಯೋಗ ಪಡೆದುಕೊಂಡು ತಂದೆ ತಾಯಿಯ ಹಾಗೂ ಗ್ರಾಮದ ಹೆಸರು ಉಳಿಸುವಲ್ಲಿ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಿತ್ತೂರಾಣಿ ಶಾಲೆಯ ಶಿಕ್ಷಕ ಮಹಾಂತೇಶ್ ಬಟ್ಟೂರ, ಸಾಯಿನಾಥ ವಾಘಮಾರೆ, ಸುನೀಲ ವಾಘಮಾರೆ, ಶಿಕ್ಷಕರಾದ ರಾಜಕುಮಾರ ಡೊಣಗಾಪೂರೆ, ವಿದ್ಯಾರ್ಥಿ ಮುಖಂಡ ಅಶೋಕ್ ಶೇಂಬೆಳ್ಳಿ, ಪತ್ರಕರ್ತ ಅಂಬಾದಾಸ ನಳಗೆ, ಅನೀಲ ಮೇತ್ರೆ, ಮಲ್ಲಿಕಾರ್ಜುನ ಟೆಕರಾಜ, ವಸತಿ ನಿಲಯದ ಪ್ರಾಂಶುಪಾಲ ಬಾಲಾಜಿ ಗಾಯಕವಾಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.