ಔರಾದ: 25 ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಸಂತಪುರ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯ ಮುಂದೆ ಪ್ರತಿಭಟನೆ ನಡೆಸಿದರು.
ಕುಡಿಯುವ ನೀರು, ಶೌಚಾಲಯ, ಊಟದ ವ್ಯವಸ್ಧೆ, ಸ್ವಚ್ಛತೆ ಸೇರಿ ಮೂಲ ಸೌಲಭ್ಯಗಳು ವಸತಿ ನಿಲಯದಲ್ಲಿ ಮರೀಚಿಕೆಯಾಗಿವೆ. ಸಮರ್ಪಕವಾಗಿ ಊಟ ಕೂಡ ನೀಡುತ್ತಿಲ್ಲ, ಸ್ನಾನಕ್ಕೆ ಬಿಸಿ ನೀರು ಕೂಡ ಕೊಡುತ್ತಿಲ್ಲ ವಿದ್ಯಾರ್ಥಿಗಳು ಸೌದೆಯಿಂದ ನೀರು ಕಾಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತ ರತ್ನದೀಪ್ ಕಸ್ತೂರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಸತಿ ನಿಲಯದ ಮುಖ್ಯಸ್ಥರ ವಿರುದ್ದ ಘೋಷಣೆ ಕೂಗಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ವಸತಿ ನಿಲಯದ ಸಮಸ್ಯೆ ಬಗೆಹರಿಸಿಬೇಕು, ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.