ಔರಾದ: ನಿಸರ್ಗ ಮಡಿಲಲ್ಲಿ ಬೆರೆತಾಗ ಜೀವನಕ್ಕೆ ಹೊಸ ಚೈತನ್ಯ ದೊರೆಯುತ್ತದೆ, ನಿಸರ್ಗದಲ್ಲಿ ಹಸಿರು ಜೀವ ಸಂಕುಲದ ಉಸಿರಾಗಿದೆ. ನಿಸರ್ಗದ ಮಡಿಲಲ್ಲಿ ಇರುವ ಗಿಡ ಮರ ಹೂ ಬಳ್ಳಿ ಪ್ರಾಣಿ ಪಕ್ಷಿಗಳನ್ನು ಸೊಬಗು ನೋಡುವುದು ಕಣ್ಣಿಗೆ ಆನಂದ ಮನಸ್ಸಿಗೆ ಮುದ ನೀಡುತ್ತದೆಂದು ನಾಗಮಾರಪಳ್ಳಿ ಪ್ರೌಢ ಶಾಲೆಯ ಮುಖ್ಯಗುರು ತುಳಸಿರಾಮ ಬೇಂದ್ರೆ ನುಡಿದರು.
ಸರಕಾರಿ ಪ್ರೌಢ ಶಾಲೆ ಯನಗುಂದಾದಲ್ಲಿ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ “ನಮ್ಮ ನಡಿಗೆ ನಿಸರ್ಗದ ಕಡೆಗೆ” ಎನ್ನುವ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿಸರ್ಗವೇ ನಮ್ಮೇಲ್ಲರ ಬದುಕು, ಅದರ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಸುಂಧಾಳ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪ್ರೀಯಂಕಾ ರಾವುಸಾಹೇಬ್ ಪಾಟೀಲ, ಮಕ್ಕಳು ಅಂಕಗಳಿಸುವ ಯಂತ್ರಗಳಾಬಾರದು, ಅಂಕಗಳ ಬೆನ್ನು ಬಿದ್ದ ಪಾಲಕರು ಮಕ್ಕಳ ಬಾಲ್ಯವನ್ನೇ ಕಸಿದುಕೊಳ್ಳುತ್ತಿದ್ದಾರೆ. ಮಕ್ಕಳು ಮಾನಸಿಕ ಒತ್ತಡದಲ್ಲಿ ಬದುಕುತ್ತಿರುವುದು ನೋವಿನ ಸಂಗತಿ. ಕಲಿಕೆ ಸಂತಸವುಂಟು ಮಾಡಬೇಕು, ಮಕ್ಕಳಲ್ಲಿ ಸೃಜನಶೀಲತೆ, ಕ್ರೀಯಾಶಿಲತೆ ಬೆಳೆಸಲು ಪೂರಕವಾಗಬೇಕು. ಶಿಕ್ಷಣ ಬರಿ ಅಂಕಕ್ಕೆ ಸೀಮಿತವಾಗದೇ ಮಕ್ಕಳ ಸರ್ವಾಂಗೀನ ವಿಕಾಸಕ್ಕೆ ಪೂಕವಾಗಿರಬೇಕೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಯನಗುಂದಾ ಪ್ರೌಢ ಶಾಲೆ ಮಕ್ಕಳಿಗೆ ರಚನಾತ್ಮಕ ಚಟುವಟಿಕೆಗಳ ಮೂಲಕ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವುದು ಪ್ರಸಂಶನೀಯವಾಗಿದೆ ಎಂದು ತಿಳಿಸಿದರು.
ನಿಸರ್ಗದ ನಡಿಗೆ: ಯನಗುಂದಾದ ವಿದ್ಯಾರ್ಥಿಗಳು ಬೆಳಗ್ಗೆ ಹತ್ತು ಗಂಟೆಗೆ ಶಾಲಾ ಅವರಣದಿಂದ ನಿಸರ್ಗದ ಕಡೆಗೆ ತಮ್ಮ ನಡಿಗೆ ಪ್ರಾರಂಭಿಸಿದರು. ನಡೆಯಬೇಕಾದ ದಾರಿಯನ್ನು ಮೊದಲೇ ವನವಿದ್ಯಾ ಸಂಕೇತದ ಮೂಲಕ ಗುರುತಿಸಲಾಗಿತ್ತು. ವನವಿದ್ಯಾ ಸಂಕೇತಗಳನ್ನು ಹಿಂಬಾಲಿಸಿಕೊಂಡು ಮುನ್ನಡೆದ ಮಕ್ಕಳು ದಾರಿ ಮಧ್ಯದಲ್ಲಿ ಚಿಟಿಗಳನ್ನು ಹುಡುಕಾಡಿ ಚಿಟಿಯಲ್ಲಿ ಬರೆದಿರುವಂತೆ ಪ್ರಾರ್ಥನೆ, ವಚನ ಗಾಯನ, ಅಭಿನಯ ಗೀತೆ, ನಟನೆ, ನೃತ್ಯ, ಧ್ಯಾನ ಹೀಗೆ ವಿಧ ವಿಧದ ಚಟುವಟಿಕೆಗಳು ಮಾಡುತ್ತಾ ದಾರಿ ಉದ್ದಕ್ಕೂ ಮಹಾನ ವ್ಯಕ್ತಿಗಳಿಗೆ ಜೈಘೋಷ ಹಾಕುತ್ತಾ ಮಕ್ಕಳು ಗಿಡ ಗಂಟೆಗಳ ಮಧ್ಯ, ಕೀರಿದಾದ ದಾರಿ, ಹರಿಯುವ ನೀರು , ಹೊಲಗದ್ದೆಗಳು ದಾಟಿಕೊಂಡು 4 ಕಿ.ಮೀ ನಷ್ಟು ನಡೆದು ತೇಂಗಪೂರ ಕೆರೆಗೆ ಬಂದು ತಲುಪಿದರು.
ಗಿಡಮೂಲಿಕೆಗಳ ಪರಿಚಯ: ದಾರಿಯ ಮಧ್ಯದಲ್ಲಿ ನಾಟಿ ವೈದ್ಯ ಬಸವರಾಜ ಘೂಳೆ ಮಕ್ಕಳಿಗೆ ನಿಸರ್ಗದಲ್ಲಿ ದೊರೆಯಬಹುದಾದ ಗಿಡ-ಮರ, ಬಳ್ಳಿ, ಎಲೆ, ಹೂವು ಹಣ್ಣು ಗೆಡ್ಡೆ ಗೆಣಸುಗಳ ಪರಿಚಯ ಮಾಡುತ್ತಾ ಅವುಗಳ ಉಪಯುಕ್ತತೆಯ ಬಗ್ಗೆ ಮಾಹಿತಿ ಒದಗಿಸಿದರು. ಸುತ್ತಮುತ್ತಲು ನಡೆಯುವ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೇ ಮೀನುಗಾರಿಕೆ ಬಗ್ಗೆಯು ವಿಶೇಷ ಅನುಭವ ಪಡೆದುಕೊಂಡರು. ಗ್ರಾಮದ ಪ್ರಗತಿಪರ ರೈತರಾಗಿರುವ ಚನ್ನಪ್ಪಾ ಕೋರೆ ಅವರ ಹೊಲದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಊಟದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮೂಲಕ ಕುಣಿದು ಕುಪ್ಪಳಿಸಿ ಮನೋರಂಜನೆ ಮಾಡಿದರು.
ಕಾರ್ಯಕ್ರಮದಲ್ಲಿ ಸುಂಧಾಳ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ಶರಣಪ್ಪಾ ಗಾದಗೆ, ವರದಿಗಾರ ಶರಣಪ್ಪಾ ಚೆಟಮೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜಾನನ್ ಮಳ್ಳಾ, ಯುವ ಸಾಹಿತಿ ಬಾಲಾಜಿ ಕುಂಬಾರ, ಬಿ.ಎಂ ಅಮರವಾಡಿ, ಮುಖಂಡರಾದ ರಾವುಸಾಹೇಬ್ ಪಾಟೀಲ, ಜಗದೀಶ ಪಾಟೀಲ, ನಾಗಶೇನ ತಾರೆ, ರವಿ ಡೋಳೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಜ ಶೆಟಕಾರ ಮುಂತಾದವರು ಭಾಗವಹಿಸಿದರು.