ಔರಾದ: ಪ್ರಜೆಗಳು ಬುದ್ಧಿವಂತರಾಗಿ ಮತ ಚಲಾಯಿಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ಶಿವಪುತ್ರ ಧರಣಿ ಹೇಳಿದರು.
ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡ್ಡಾಯವಾಗಿ ಪ್ರತಿಯೊಬ್ಬ ಪ್ರಜೆ ಮತದಾನ ಮಾಡಬೇಕು. ಅರಿವು ಮತ್ತು ಜಾಗೃತಿ ಮೂಡಿಸುವ ಮತದಾರರ ಕಾರ್ಯಕ್ರಮವಾಗಿದೆ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸೌಲಭ್ಯ ಒದಗಿಸಿದೆ ಅದರಲ್ಲಿ ಪ್ರಮುಖವಾದದ್ದು ಮತದಾನದ ಹಕ್ಕು. ಮತ ಚಲಾವಣೆ ಕಡಿಮೆಯಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಂತೆ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಬೇಕಾದರೆ ಮತದಾನ ಮಾಡುವುದು ಅತಿ ಮುಖ್ಯ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ‘ಮತ ಮಾರಿದರೆ, ಮನೆ ಹೆಣ್ಣು ಮಕ್ಕಳನ್ನು ಮಾರಿದಂತೆ’ ಎಂಬುದನ್ನು ಮನವರಿಕೆ ಮಾಡಿ ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಮತ್ತು ಇತರರಿದ್ದರು.