ಔರಾದ: ದೀನದಲಿತರ ಮತ್ತು ಬಡ ಜನರಿಗೆ ಅವಕಾಶ ಹಾಗೂ ಸೌಲಭ್ಯಗಳು ದೊರೆಯಲೆಂದು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದವರು ಡಾ.ಜಗಜೀವನ್ ರಾಮ್ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ, ಹಸಿರು ಕ್ರಾಂತಿಯ ಹರಿಕಾರರು, ಮಾಜಿ ಉಪಪ್ರಧಾನಿಯಾಗಿ ಇತ್ಯಾದಿ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದವರು ಬಾಬೂಜಿಯವರು ಎಂದರು.
ಉಪನ್ಯಾಸಕಿ ಮೀರಾತಾಯಿ ಕಾಂಬಳೆ ಮಾತನಾಡಿ, ಜಾತಿ ತಾರತಮ್ಯವನ್ನು ವಿರೋಧಿಸಿ, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದವರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಬಾಬು ಜಗಜೀವನ್ ರಾಮ್ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶಿವಪುತ್ರ ಧರಣಿ ಮಾತನಾಡಿದರು. ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಸುರೇಖಾ ದಡ್ಡೆ ಇದ್ದರು.