ಔರಾದ: ಜಗತ್ತಿನಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಸರ್ವ ಜೀವಿಗಳ ಮೇಲೆ ದಯೆ ಇರಲಿ ಅದೇ ಅಹಿಂಸಾ ಪರಮೋಧರ್ಮ ಸಂದೇಶ ಮೂಲಕ ವಿಶ್ವಕ್ಕೆ ಶಾಂತಿ ಸಾರಿದವರು 24ನೇ ತೀರ್ಥಂಕರ ವರ್ಧಮಾನ ಮಹಾವೀರರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಹೇಳಿದರು.
ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಭಗವಾನ್ ವರ್ಧಮಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತು, ಅನ್ಯರನ್ನು ಅರಿಯಲಾರನು, ತನ್ನ ಅರಿವಿನಿಂದಲೇ ಮುಕ್ತಿ, ತಾನು ಸರಿಹೋದರೆ ಲೋಕ ಕಲ್ಯಾಣ ಮಹಾವೀರರ ಸಂದೇಶ ಜೊತೆಗೆ ಯುದ್ಧವನ್ನು ಮಾಡದೆ ಜಗತ್ತನ್ನು ಹೇಗೆ ಗೆಲ್ಲಬೇಕು. ಬಾಳು ಮತ್ತು ಎಲ್ಲರಿಗೂ ಬಾಳಲು ಅವಕಾಶ ಮಾಡಿಕೊಡು ಎನ್ನುವ ಶ್ರೇಷ್ಠ ಸಂದೇಶವನ್ನು ಜಗತ್ತಿಗೆ ಸಾರಿದವರು ವರ್ಧಮಾನ ಮಹಾವೀರರು ಎಂದರು.
ಉಪನ್ಯಾಸಕಿ ಸುರೇಖಾ ದಡ್ಡೆ ಮಾತನಾಡಿ, ಭಗವಾನ ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚಾರ್ಯ, ಹಾಗೂ ಅಪರಿಗ್ರಹ ಎಂಬ ಪಂಚಶೀಲ ತತ್ವಗಳು ಮತ್ತು ಶಾಂತಿ, ಅಹಿಂಸೆ ಮತ್ತು ಸಮಾನತೆ ಮಂತ್ರವನ್ನು ಬೋಧಿಸಿದವರು ಎಂದು ಹೇಳಿದರು. ಉಪನ್ಯಾಸಕರಾದ ಶಿವಪುತ್ರ ಧರಣಿ, ಅಂಬಿಕಾ ವಿಶ್ವಕರ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಕಲ್ಲಪ್ಪ ಬುಟ್ಟೆ, ವನದೇವಿ ಎಕ್ಕೆಳೆ, ಸುಧಾ ಕೌಟಗೆ, ಮೀರಾತಾಯಿ ಕಾಂಬಳೆ ಮತ್ತು ಇತರರು ಉಪಸ್ಥಿತರಿದ್ದರು.