ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಶುಕ್ರವಾರ ಔರಾದ(ಬಿ) ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಬ್ಲಾಕ್ ಲೇವಲ್ ಪಬ್ಲಿಕ್ ಹೆಲ್ತ್ ಲ್ಯಾಬ್ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವರು, ಸಾರ್ವಜನಿಕರ ಹಿತಾಸಕ್ತಿಯಿಂದ ಪಟ್ಟಣದಲ್ಲಿ ಹೆಲ್ತ್ ಲ್ಯಾಬ್ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಕಳಪೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಆಸ್ಪತ್ರೆಯ ವ್ಯವಸ್ಥೆ ಪರಿಶೀಲನೆ: ಇದೇ ವೇಳೆ ಸಚಿವರು ಆಸ್ಪತ್ರೆಯ ವಿವಿಧ ವಾರ್ಡ್ ಗಳಲ್ಲಿ ಸಂಚರಿಸಿ ವ್ಯವಸ್ಥೆಯನ್ನು ಪರಿಶೀಲಿಸಿದರು. ರೋಗಿಗಳೊಂದಿಗೆ ಮಾತನಾಡಿ ಅವರ ಆರೋಗ್ಯ ವಿಚಾರಿಸಿದರು. ಏನು ಸಮಸ್ಯೆಯಿದೆ, ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಗೈರಾಗದಂತೆ ಮತ್ತು ಎಲ್ಲರೂ ಸಮಯ ಪಾಲನೆ(Time keeping) ಮಾಡುವಂತೆ ನೋಡಿಕೊಳ್ಳಬೇಕು. ಜನತೆಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವಂತಾಗಲು ಆಸ್ಪತ್ರೆಗೆ ಬೇಕಿರುವ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿದ್ದೇನೆ. ಅದರಂತೆ ಜನತೆಗೆ ಸರಿಯಾದ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಜ್ಞ ವೈದ್ಯರನ್ನು ತರಲು ಕ್ರಮ: ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಲಭ್ಯವಿದೆ ಅದರೂ ತಜ್ಞ ವೈದ್ಯರ ಕೊರತೆಯಿಂದ ಸಾರ್ವಜನಿಕರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು ತಜ್ಞ ವೈದ್ಯರನ್ನು ತರಲು ಶೀಘ್ರ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಔರಾದ ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ರಮನ್ ಪೋಕಲವಾರ, ಮುಖಂಡರಾದ ವಸಂತ ಬಿರಾದಾರ, ದೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವಕುಮಾರ ಪಾಂಚಾಳ, ಸಚಿನ್ ರಾಠೋಡ್, ಪ್ರತೀಕ್ ಚವ್ಹಾಣ, ಅಶೋಕ ಅಲ್ಮಾಜೆ, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ರಮೇಶಗೌಡ ಸೇರಿದಂತೆ ಇತರರಿದ್ದರು.