ಔರಾದ: ತಾಲೂಕಿನ ಹಂಗರಗಾ-ಸಾವರಗಾಂವ್ ಮಧ್ಯೆ 69 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ. ಈ ಟೆಂಡರ್‌ನಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು, ಸರ್ಕಾರದ ಕೋಟ್ಯಂತರ ರೂ. ಹಣ ಕೊಳ್ಳೆ ಹೊಡೆಯಲು ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಈ ಟೆಂಡರ್ ರದ್ದುಪಡಿಸಿ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಔರಾದ್ ಬಿಜೆಪಿ ಮುಖಂಡ ಬಂಡೆಪ್ಪ ಕಂಟೆ, ಚಾಂದೋರಿ ಗ್ರಾಪಂ ಮಾಜಿ ಅಧ್ಯಕ್ಷ ದೀಪಕ ಪಾಟೀಲ ಆರೋಪಿಸಿದ್ದಾರೆ.
ಪಶು ಸಂಗೋಪನೆ ಸಚಿವರಾದ ಔರಾದ್ ಶಾಸಕ ಪ್ರಭು ಚವ್ಹಾಣ ಅವರ ಮನೆ ಹತ್ತಿರದ ಸಣ್ಣ ಹಳ್ಳದಲ್ಲಿ ಚೆಕ್‌ಡ್ಯಾಂ ಕಟ್ಟಬಹುದಾದ ಜಾಗದಲ್ಲಿ ಭಾರಿ ಮೊತ್ತದ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಇದರಿಂದ ಯಾವೊಬ್ಬ ರೈತರಿಗೂ ಲಾಭವಿಲ್ಲ. ಇಲ್ಲಿಂದ ಕೇವಲ 2 ಕಿಮೀ ದೂರದಲ್ಲಿ ಮಹಾರಾಷ್ಟ್ರವಿದೆ. ಯಾರಿಗೆ ಅನುಕೂಲ ಮಾಡಲು ಬ್ರಿಡ್ಜ್ ಕಮ್ ಬ್ಯಾರೇಜ್ ಕಟ್ಟಲಾಗುತ್ತಿದೆ ತಿಳಿಯುತ್ತಿಲ್ಲ. ಇಲ್ಲಿನ ಕಾಮಗಾರಿ, ದೊಡ್ಡ ಮೊತ್ತ ಗಮನಿಸಿದರೆ ಸರ್ಕಾರದ ಖಜಾನೆ ಲೂಟಿಗಾಗಿ ಪ್ರಯತ್ನ ನಡೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಕುರಿತು ಸರ್ಕಾರದ ಮುಖ್ಯ ಕಾವ್ಯದರ್ಶಿ ಸೇರಿ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಟ್ಟುವುದು ಸಾಮಾನ್ಯ, ಚೆಕ್‌ಡ್ಯಾಂ ನಿರ್ಮಿಸಬೇಕಾದಂಥ ಹಳ್ಳದ ಸ್ಥಳದಲ್ಲಿ ನಿರ್ಮಾಣಕ್ಕೆ ಹೊರಟಿರುವುದು, ಇದಕ್ಕೆ ಸ್ಥಳೀಯ ಶಾಸಕರೇ ಆಸಕ್ತಿ ವಹಿಸಿ ಶಿಫಾರಸ್ಸು ಪತ್ರ ಬರೆದು ಮಂಜೂರಿ ಮಾಡಿಸಿರುವುದು ನಾನಾ ಶಂಕೆಗಳಿಗೆ ಕಾರಣವಾಗಿದೆ. ಮೇಲಾಗಿ ಟೆಂಡರ್ ನೀಡುವಲ್ಲಿ ಸಹ ಅನೇಕ ನಿಯಮ ಉಲ್ಲಂಘಿಸಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಚುನಾವಣೆ ಹೊತ್ತಿನಲ್ಲಿ ಹಣ ಕೊಳ್ಳೆಗೆ ಯತ್ನಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ಟೆಂಡರ್ ರದ್ದುಪಡಿಸುವ ಜತೆಯಲ್ಲಿ ಇಲ್ಲಿ ಪ್ರಮಾದ ಮಾಡಿರುವವರ ವಿರುದ್ಧ ಕ್ರಮಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ದೇಶಮುಖ್, ಬಾಳಾಸಾಹೇಭ ರಾಠೋಡ, ಕಿರಣ ಪಾಟೀಲ ಚಿಕ್ಲಿ ಇದ್ದರು.