ಔರಾದ: ಪ್ರಜಾಪ್ರಭುತ್ವ ಯಶಸ್ವಿಗೆ ಜಾಗೃತ ಮತದಾರರ ಪಾತ್ರ ಮಹತ್ವದ್ದಾಗಿದೆ. ಮತದಾನ ನಮ್ಮೆಲ್ಲರ ಹಕ್ಕು. ಜೊತೆಗೆ ಕರ್ತವ್ಯವೂ ಆಗಿದೆ. ಕಡ್ಡಾಯ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಾದರಪಡಿಸಿ ದೇಶದ ಭವಿಷ್ಯ ನಿರ್ಮಾಣ ಮಾಡಬೇಕು ಎಂದು ಡಾ. ಭೀಮಸೇನರಾವ್ ಶಿಂಧೆ ಹೇಳಿದರು.
ಔರಾದ ಮೀಸಲು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಭಾರತವು ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ, ಧರ್ಮ, ಜಾತಿ, ಜನಾಂಗಗಳ ಭೇದ- ಭಾವವಿಲ್ಲದೇ ನಿರ್ಭಯವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಯುವಕರು ಪ್ರಜಾಪ್ರಭುತ್ವದ ಜಾತ್ರೆಯಾದ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗಿಯಾಗಿ ಮತಚಲಾವಣೆ ಮಾಡಬೇಕು. ಜೊತೆಗೆ ಶೇಕಡಾ ನೂರರಷ್ಟು ಮತದಾನವಾಗಲು ನಾವೆಲ್ಲರೂ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಒಳ್ಳೆಯ, ಸುದೃಢ ಸರ್ಕಾರ ಆಯ್ಕೆ ಸಾಧ್ಯ ಎಂದರು.