ಔರಾದ: ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾಹಾರಾಜವಾಡಿ ಗ್ರಾಮದ ಬೀರಪ್ಪ ಮಂದಿರ ಮುಂಭಾಗದ ಕುಡಿವ ನೀರಿನ ಬೋರ್‌ವೆಲ್ ಕೆಟ್ಟಿದ್ದು, ದುರಸ್ತಿ ಮಾಡಿ ಸಾರ್ವಜನಿಕರ ಬಳಕೆಗೆ ಅರ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇಲ್ಲಿ ಒಣಿಯ ಸುತ್ತಲಿನ ಕುಟುಂಬಗಳಿಗೆ ಅನುಕೂಲ ದೃಷ್ಟಿಯಿಂದ ಮಂದಿರದ ಆವರಣದಲ್ಲಿ ಕೇಲವು ವರ್ಷದ ಹಿಂದೆ ಬೋರ್‌ವೆಲ್ ಹಾಕಿಸಲಾಗಿದೆ. ಕೇಲವು ತಿಂಗಳು ಇದೇಬೋರ್‌ವೆಲ್ ಅನ್ನು ಇಲ್ಲಿನ ಗ್ರಾಮಸ್ಥರು ಕುಡಿವ ನೀರಿಗೆ ಮನೆ ಬಳಕೆಗೆ ಅವಲಂಬಿಸಿದ್ದರು. ಆದರೆ ಈಗ ಬೋರ್‌ವೆಲ್ ಕೆಟ್ಟು ಕಾಲವೇ ಗತಿಸಿದೆ. ಮೋಟರ್ ರಿಪೇರಿ ಮಾಡಿಸಿ ಬಳಕೆಗೆ ನೀಡಬೇಕಾದ ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಕಾರಣ ಇಲ್ಲಿನ ಒಣಿಯ ಜನರು ದನ ಕರುಗಳು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಬೋರ್‌ವೆಲ್ ರಿಪೇರಿ ಮಾಡಿ ಗ್ರಾಮಕ್ಕೆ ಹಾಗೂ ಮೂಕ ಪ್ರಾಣಿಗಳಿಗೆ ಕುಡಿಯಲು ನೀರಿನ ಅನುಕೂಲ ಕಲ್ಪಿಸಬೇಕಿದೆ. ಕೆಲವು ತಿಂಗಳಿಂದ ಇಲ್ಲಿನ ಬೋರ್‌ವೆಲ್ ಹಾಳಾಗಿದೆ. ರಿಪೇರಿ ಮಾಡುವಂತೆ ಪಿಡಿಒ, ಗ್ರಾ.ಪಂ.ಸದಸ್ಯರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಬೋರ್‌ವೆಲ್ ರಿಪೇರಿ ಮಾಡಿದರೆ ದನ ಕರುಗಳಿಗೆ ನೀರು ಕುಡಿಯಲು ಅನುಕೂಲವಾಗಲಿದೆ ಎಂದು ಗ್ರಾಮಸ್ಥ ಸಾದುರೆ ಶಿವಕುಮಾರ ಮಾಹಾರಾಜವಾಡಿ ಆಗ್ರಹಿಸಿದ್ದಾರೆ.