ಔರಾದ : ಗ್ರಾಹಕರು ಕಡ್ಡಾಯವಾಗಿ ಎಲ್ಲರ ಮನೆಗಳಲ್ಲಿ ಎಲ್ ಇಡಿ ಬಲ್ಬಗಳನ್ನು ಉಪಯೋಗಿಸಿ, ಇಂಧನ ಉಳಿತಾಯ ಮಾಡಲು ಕೈ ಜೋಡಿಸಬೇಕು. ಇದರಿಂದ ಇಲಾಖೆ ಮತ್ತು ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಾಣಿಕ ಪವಾರ್ ತಿಳಿಸಿದರು.
ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಏರ್ಪಡಿಸಿದ್ದ ವಿದ್ಯುತ್ ಅದಾಲತ ಕಾರ್ಯಕ್ರಮದಲ್ಲಿ ಮಾತನಾಡಿ, ಮಳೆ, ಗಾಳಿ, ಸಿಡಿಲು ಬಂದಾಗ ಮನೆಯಲ್ಲಿನ ನಿತ್ಯ ಉಪಯೋಗಿಸುವ ವಸ್ತುಗಳನ್ನು ಬಳಸಬಾರದು. ಇದರಿಂದ ಬೆಲೆ ಬಾಳುವ ವಸ್ತುಗಳು ಹಾಳಾಗುವ ಸಂಭವ ಇರುತ್ತದೆ. ಸಾರ್ವಜನಿಕರು ಇಲಾಖೆ ಸಿಬ್ಬಂದಿಯೊಂದಿಗೆ ಉತ್ತಮವಾಗಿ ವ್ಯವಹರಿಸಬೇಕು. ಇಲಾಖೆಗೆ ಸಂಬಂಧಿಸಿದಂತೆ ಕುಂದು ಕೊರತೆಗಳಿದ್ದರೆ ಸೇರಿ ಗ್ರಾಹಕರು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.
ಕಿರಿಯ ಇಂಜಿನಿಯರ್ ರಾಜಗೊಂಡ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿದ್ಯುತ್ ಅದಾಲತ್ ಯೋಜನೆ ಸಹಕಾರಿಯಾಗಿದೆ ಎಂದರು.
ರೈತರಾದ ಮಾದಪ್ಪ, ಮಾದಪ್ಪ ಗಡರೆ, ರೇವಣಪ್ಪ ಚಿಮಕೋಡೆ, ಕಲ್ಲಪ್ಪ ಚಿಮಕೊಡೆ ಅವರು ಹೊಲದಲ್ಲಿ ವಿದ್ಯುತ್ ಸಂಪರ್ಕ, ಪರಿವರ್ತಕ ಕಲ್ಪಿಸಲು ಹಣ ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕಾಮಗಾರಿ ಆಗಿಲ್ಲ ಎಂದು ತಮ್ಮ ಗೋಳು ತೋಡಿಕೊಂಡರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಲೋಡ್ ಹೆಚ್ಚಳ, ಹೊಸ ಕಾಲನಿಗಳಿಗೆ ವಿದ್ಯುತ್ ಸಂಪರ್ಕ, ತೋಟದ ಮನೆಗಳಿಗೆ ನಿರಂತರ ಜ್ಯೋತಿ ಸೇರಿ ಇನ್ನಿತರ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಮನವಿ ಸಲ್ಲಿಸಿದರು. ಪ್ರಭಾರಿ ಕಿರಿಯ ಅಭಿಯಂತರ ಗುರುನಾಥ, ಮಾದಪ್ಪ, ರೇವಣಪ್ಪ, ಕಲ್ಲಪ್ಪ ಸೇರಿದಂತೆ ಇತರರಿದ್ದರು.