ಔರಾದ: ತಾಲ್ಲೂಕಿನ ಮುಸ್ತಾಪೂರ ಗ್ರಾಮದ ರಸ್ತೆಯ ಮೇಲೆ ಕಲ್ಲು, ಮಣ್ಣು ಬಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶೀಘ್ರದಲ್ಲಿ ಕಲ್ಲು ಮಣ್ಣು ತೆರವುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಧನರಾಜ್ ಮುಸ್ತಾಪುರೆ ಒತ್ತಾಯಿಸಿದ್ದಾರೆ.
ಲಾಧಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಸ್ತಾಪೂರ ಗ್ರಾಮದಲ್ಲಿ ಸೂಕ್ತ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಶೌಚಾಲಯದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯ ಮೇಲೆ ಶೌಚಾಲಯದ ನೀರು ಬಿಟ್ಟಿರುವ ಬಗ್ಗೆ ಕೆಲವು ದಿವಸಗಳ ಹಿಂದೆ ಕೆಲವರಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಮಕ್ಕಳು, ವಯೋವೃದ್ಧರು ರಸ್ತೆಯ ಮೇಲೆ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ನೋಟಿಸ್ ನೀಡಿದರು ಕ್ಯಾರೆ ಎನ್ನುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.