ಔರಾದ: ದಿ-ನಡ್ಜ್ ಫೌಂಡೇಶನ್ (ನಡ್ಜ್ ಅಲ್ಟ್ರಾ ಪೂವರ್ ಪ್ರೋಗ್ರಾಂ) ವತಿಯಿಂದ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಡು ಬಡವರಿಗೆ ಜೀವನ ಸಾಗಿಸಲು ಉಚಿತವಾಗಿ ಮೇಕೆಗಳನ್ನು ನೀಡಲಾಯಿತು.
ನಡ್ಜ್ ಅಲ್ಟ್ರಾ ಪೂವರ್ ಪ್ರೋಗ್ರಾಂ ರಾಜ್ಯ ಮುಖ್ಯಸ್ಥ ಶ್ರೀಕಾಂತಕುಮಾರ್ ರೌಥ್ ಮಾತನಾಡಿ, ಹಳ್ಳಿಗಳಲ್ಲಿ ಕಡುಬಡತನದ ಕುಟುಂಬಗಳ ಸರ್ವೆ ಹಾಗು ಮಾಹಿತಿ ಕಲೆಹಾಕುವ ಕಾರ್ಯಕ್ರಮ ಆರು ತಿಂಗಳಿನಿಂದ ಜರುಗಿದ ನಂತರ ಅರ್ಹ ಫಲಾನುಭವಿಗಳಿಗೆ ಗುರ್ತಿಸಿ ಅವರ ಬಡತನ ನಿವಾರಣೆ ಸಮಸ್ಯೆಗೆ ಈ ಕೆಲಸ ಮಾಡಲಾಗಿದೆ. 22ನೇ ಅಗಷ್ಟ 2022ರಂದು ಈ ಸಂಸ್ಥೆಯ ಪ್ರಮುಖ ಅಂಗವಾದ ಅಲ್ಟ್ರಾ ಪೂವರ್ ಕಾರ್ಯಕ್ರಮವೂ ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ 21 ಸದಸ್ಯರ ಕ್ಷೇತ್ರ ತಂಡದೊಂದಿಗೆ ಪ್ರಾರಂಭಿಸಲಾಗಿದ್ದು, 1000ಕ್ಕೂ ಹೆಚ್ಚು ಅತಿ ಕಡು ಬಡವರ(ನಿರ್ಗತೀಕರು) ಶ್ರಯಾಭಿವೃದ್ಧಿಗೆ ಶ್ರಮಿಸಲು ಪಣತೊಟ್ಟಿದೆ. ಆದುದರಿಂದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಸ್ಥಾಪಕ ಅತೂಲ್ ಸತೀಜಾ ಅವರ ನೇತ್ರತ್ವದಲ್ಲಿ ಜುಲೈ 2015ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ದಿ-ನಡ್ಜ್ ಫೌಂಡೇಶನ್ ಭಾರತೀಯ ಲಾಭರಹಿತ ಸಂಸ್ಥೆಯಾಗಿದೆ. ಸುಸ್ಥಿರವಾಗಿ, ಸಹಕಾರಿಯಾಗಿ ಮತ್ತು ಸ್ಕೇಲೆಬಲ್ ಆಗಿ ಬಡತನವನ್ನು ನಿವಾರಿಸಲು ಈ ಸಂಸ್ಥೆ ಕಾರ್ಯನ್ಮುಖವಾಗಿದೆ. 20 ಆಗಷ್ಟ್ 2022ರಿಂದ ಕಲಬುರ್ಗಿ ಜಿಲ್ಲೆಯ ಆಳಂದ ಮತ್ತು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನಗೊಂಡಿರುವುದರಿಂದ ಬಡಜನತೆ ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ನಡ್ಜ್ ಅಲ್ಟ್ರಾ ಪೂವರ್ ಪ್ರೋಗ್ರಾಂ ರಾಜ್ಯ ಮುಖ್ಯಸ್ಥ ಶ್ರೀಕಾಂತಕುಮಾರ್ ರೌಥ್ ತಿಳಿಸಿದರು.
ದಿ ನಡ್ಜ್ ಅಲ್ಟ್ರಾ ಪೂವರ್ ಪ್ರೋಗ್ರಾಂ ಕಲಬುರ್ಗಿ ಸಂಸ್ಥೆಯ ಮುಖ್ಯಸ್ಥ ನಾಗರಾಜ್ ಹೆಂಬಾಡಿ ಮಾತನಾಡಿ, ಅತ್ಯಂತ ಕಡುಬಡತನದ ನಿರ್ಮೂಲನೆ ಮಾಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಅದರಂತೆ ಅತಿ-ಬಡತನದ ಕುಟುಂಬಗಳನ್ನು ಪರಿಶೀಲನೆ ಮಾಡಲು ನಮ್ಮ ಹತ್ತಿರ ಈಗಾಗಲೇ ನೂರಿತ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಿ ಅವರಿಗೆ ಜಾರ್ಖಂಡ್ ರಾಜ್ಯದಲ್ಲಿ ಏಳು ದಿನಗಳ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಅವರುಗಳು ಔರಾದ್ ತಾಲೂಕಿನ ಗ್ರಾಮಗಳ ಗುರುತಿಸುವಿಕೆ ಮತ್ತು ನಂತರ ತೀವ್ರ ಬಡ ಕುಟುಂಬಗಳ ಆಯ್ಕೆ ಮತ್ತು ಮೌಲ್ಯೀಕರಣಮಾಡಿ, 300 ಕುಟುಂಬಗಳನ್ನು ಬಡತನದ ಕುಟುಂಬಗಳೆಂದು ಗುರ್ತಿಸಿದ್ದಾರೆ. ಸದ್ಯಕ್ಕೆ ಅವರ ಜೀವನೋಪಾಯ ಭದ್ರತೆಗೆ ಮೇಕೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬಡತನ ರೇಖೆಯ ಪರಿವಾರಗಳನ್ನು ಗುರ್ತಿಸಿ ಅವರಿಗೆ ಗುಡಿಕೈಗಾರಿಕೆಗೆ ನೆರವು ನೀಡಲಾಗುವುದೆಂದರು.
ಈ ವೇಳೆ ಶನಿವಾರ ಔರಾದ್ ಮತ್ತು ಕಮಲನಗರ ತಾಲೂಕಿನ ಎಕ್ಕಂಬಾ, ಠಾಣಾಕುಶನುರು, ವಡಗಾಂವ ದೇ, ಬೋರ್ಗಿ(ಜೆ), ಚಿಕಲಿ, ಖಾನಪುರ, ಜೋಜನಾ, ಲಾಧಾ, ಜೀರ್ಗಾ, ಕೌಠಾ, ಕೊಳ್ಳುರ್, ಸೇರಿದಂತೆ ಒಟ್ಟು 50 ಗ್ರಾಮಗಳಲ್ಲಿ ಸುಮಾರು 3೦೦ ಕುಟುಂಬಗಳಿಗೆ ತಲಾ ಎರಡರಂತೆ 6೦೦ ಮೇಕೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರವಿಕುಮಾರ್ ಮಠಪತಿ, ಮಲ್ಲಿಕಾರ್ಜುನ, ರತಿಕಾಂತ ಸ್ವಾಮಿ, ವಿರೇಶ ಜೀರ್ಗೆ, ಮಹಾದೇವ ಸ್ವಾಮಿ ಸೇರಿದಂತೆ ಇತರರಿದ್ದರು.