ಔರಾದ: ಭೀಮ್ ಆರ್ಮಿ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಬೀದರ್ ಜಿಲ್ಲೆಗೆ ಮೂರು ಆಂಬುಲೆನ್ಸ್ ಗಳನ್ನು ಒದಗಿಸಿದೆ ಎಂದು ಭೀಮ್ ಆರ್ಮಿಯ ಔರಾದ ತಾಲೂಕು ಘಟಕದ ಅಧ್ಯಕ್ಷ ಗೌತಮ್ ಮೇತ್ರೆ ತಿಳಿಸಿದ್ದಾರೆ.
ಔರಾದ ತಾಲೂಕಿನ ಸಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದ 108 ಆಂಬುಲೆನ್ಸ್ ವಾಹನಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ತುರ್ತು ಸೇವೆಗೆ 108 ಅಂಬುಲೆನ್ಸ್ ವಾಹನಗಳು ಲಭ್ಯವಾಗದೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕಮಲನಗರ ಮತ್ತು ಔರಾದ ತಾಲೂಕಿಗೆ ತಕ್ಷಣ ಅಂಬುಲೆನ್ಸ್ ಗಳನ್ನು ಒದಗಿಸುವಂತೆ ಒತ್ತಾಯಿಸಿ ಇತ್ತೀಚಿಗೆ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರ ಮೂಲಕ ಆರೋಗ್ಯ ಸಚಿವ ಕೆ. ಸುಧಾಕರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೆವು.
ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದರು. ಜಿಲ್ಲೆಗೆ ಒಟ್ಟು 8 ಆಂಬುಲೆನ್ಸ್ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಪೈಕಿ ಪ್ರಸ್ತುತ 3 ಆಂಬುಲೆನ್ಸ್ ಗಳನ್ನು ಒದಗಿಸಲಾಗಿದೆ. ಇಂದು ಔರಾದ್ ತಾಲೂಕಿನ ಸಂತಪುರ ಅರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ವಾಹನ ನೀಡಿದ್ದಾರೆ. ನಾಳೆ ಔರಾದ ಮತ್ತು ವಡಗಾಂವ ಗ್ರಾಮಕ್ಕೆ ತಲಾ ಒಂದು ಆಂಬುಲೆನ್ಸ್ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾಕ್ಟರ್ ಆಶಾ ರಾಣಿ, ಗುರುನಾಥ ಅಂಕಲಗಿ, ಸತೀಶ್ ಎಫ್‌ಡಿಸಿ, ಉಮೇಶ, ದಿಲೀಪ್ ಸೋನೆ, ಸುರೇಶ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.