News Karnataka
ಸಿಟಿಜನ್ ಕಾರ್ನರ್

ಕಮಲ ನಗರದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣ

State-of-the-art Kannada Bhavan to be constructed in Kamalanagar: Minister Prabhu Chavan
Photo Credit : Ravi Mathapati

ಔರಾದ: ಕನ್ನಡಪರ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಕಮಲ ನಗರದಲ್ಲಿ ಸುಸಜ್ಜಿತವಾದ ಕನ್ನಡ ಭವನವನ್ನು ನಿರ್ಮಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಘೋಷಿಸಿದರು.

ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಮಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 27ರಂದು ಕಮಲನಗರದ ಮಹಾತ್ಮ ಗಾಂಧಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ಕಮಲನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡಿದರು.

ಕನ್ನಡದ‌ ಕೆಲಸಗಳಿಗೆ ನಾನು ಸದಾ ಸಿದ್ಧನಿದ್ದೇನೆ. ಕನ್ನಡದ ಅಭಿವೃದ್ಧಿ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಲ್ಲಿಸುವ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷವಾಗಿ ಕಮಲನಗರದಲ್ಲಿ ಕನ್ನಡ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಇದನ್ನು ಹೀಗೆಯೇ ಮುಂದುವರೆಸಿ ನನ್ನ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

2008ಕ್ಕಿಂತ ಮುಂಚೆ ಔರಾದ ಕ್ಷೇತ್ರದಲ್ಲಿ ಕನ್ನಡ ಶಾಲೆಗಳು ಮತ್ತು ಶಿಕ್ಷಕರ ಕೊರತೆ ಸಾಕಷ್ಟಿತ್ತು. ನಾನು ಶಾಸಕನಾದ ನಂತರ‌ ಎಲ್ಲ ಕಡೆಗಳಲ್ಲಿ ಕನ್ನಡ ಶಾಲೆಗಳಾಗಿವೆ‌. ಮರಾಠಿ ಮತ್ತು ಹಿಂದಿ ಪ್ರಭಾವ ಹೆಚ್ಚಾಗಿರುವ ಈ ಭಾಗದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ ಎಂದರು.

ಹಿಂದೆ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಭಾಗದಲ್ಲಿ ಕನ್ನಡವನ್ನು ಉಳಿಸಿ‌ ಬೆಳೆಸುವಲ್ಲಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಪಾತ್ರ ಸಾಕಷ್ಟಿದೆ. ಶಾಲೆಯ ಹೊರಗಡೆ ಉರ್ದು ಫಲಕ ಹಾಕಿ ಒಳಗಡೆ ಕನ್ನಡ ಕಲಿಸುತ್ತಿದ್ದರು. ಅಂತಹ ಮಹನೀಯರ ಗೌರವಾರ್ಥವಾಗಿ ಜಿಲ್ಲಾ ಕೇಂದ್ರದಲ್ಲಿರುವ ರಂಗಮಂದಿರಕ್ಕೆ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಹೆಸರಿಟ್ಟು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕರೆಸಿ ಕಾರ್ಯಕ್ರಮ ನಡೆಸಿದ್ದೆ. ಕಮಲನಗರದಲ್ಲಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಕನ್ನಡದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಕಳೆದ ಅಧಿವೇಶನದಲ್ಲಿ‌ ಅತ್ಯಂತ ಮಹತ್ವದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಅಂಗೀಕರಿಸಲಾಗಿದೆ. ಇನ್ನು ಮುಂದೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ಸಿಗಲಿದೆ ಎಂದು‌ ತಿಳಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ, ಗುಡಸಿ ಮಾತನಾಡಿ, ಸುಮಾರು 12ಕ್ಕೂ ಹೆಚ್ಚು ರಾಜಮನೆತನಗಳಿಂದ ಆಳ್ವಿಕೆ ಕಂಡ ಬೀದರ ಜಿಲ್ಲೆಯ ಸಂಸ್ಕೃತಿ ಅತ್ಯಂತ‌‌ ಶ್ರೀಮಂತವಾಗಿದೆ. ಶರಣರು, ಸಂತರು ನಡೆದಾಡಿದ ಈ ಪುಣ್ಯಭೂಮಿಯಲ್ಲಿ ಕನ್ನಡ ಭಾಷೆ ಉಳಿದಿದೆ ಎಂದು ಹೇಳಿದರು.

ಆಶಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕನ್ನಡವನ್ನು ಉಳಿಸಿ ಬೆಳೆಸಲು ಸಾಹಿತ್ಯ ಪರಿಷತ್ತು ನಿರಂತರ ಶ್ರಮಿಸುತ್ತಿದೆ. ಕನ್ನಡ ನಾಡು, ನುಡಿಗೆ ಧಕ್ಕೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರಾದ ಪೂಜ್ಯ ಗುರುಬಸವ ಪಟ್ಟದೇವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಹೆಡಗಾಪೂರ ಸಂಸ್ಥಾನ ಮಠದ ಪೂಜ್ಯ ಶಿವಲಿಂಗ ಶಿವಾಚಾರ್ಯ, ಠಾಣಾಕುಶನೂರ ವಿರಕ್ತ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿ, ಖೇಡ ಸಂಗಮ ನೀಲಾಂಬಿಕಾ ಆಶ್ರಮದ ಪೂಜ್ಯ ಮಹಾದೇವಮ್ಮ ತಾಯಿ, ಕಮಲನಗರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಘಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಮಕ್ಸೂದ್, ಕಮಲನಗರ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ ಝುಲ್ಫೆ, ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೀಲಕಂಠರಾವ ಕಾಂಬಳೆ, ಔರಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಂಗರಾವ ಜಾಧವ್, ಬೀದರ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಟೊಣ್ಣೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಲಿಂಗಾನಂದ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ಬಸವರಾಜ ಪಾಟೀಲ, ಪ್ರೌಢ ಶಾಲಾ ಶಿಕ್ಷಕರ ಸಂಘದ ಸೂರ್ಯಕಾಂತ ಬಿರಾದಾರ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕಾಧ್ಯಕ್ಷೆ ಸಂಗೀತಾ ಸಜ್ಜನಶೆಟ್ಟೆ, ದೈಹಿಕ ಶಿಕ್ಷಕರ ಸಂಘದ ಯಶವಂತ ಬಿರಾದಾರ, ಔರಾದ ಕಸಾಪ ಅಧ್ಯಕ್ಷ ಶಾಲಿವಾನ ಉದಗೀರೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಕೋಶಾಧ್ಯಕ್ಷ‌ ಶಿವಶಂಕರ ಟೋಕರೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು, ವಿವಿಧ ಸಂಗ್ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು. ಕಸಾಪ ಕಮಲನಗರ ತಾಲ್ಲೂಕಾಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು, ಬಸವರಾಜ ಪಾಟೀಲ ವಂದಿಸಿದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *