ಔರಾದ: ಪಟ್ಟಣದ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಮೇಲೆ ಕನ್ನಡದಲ್ಲಿ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ತಾಲ್ಲೂಕು ಕರವೇ ಒತ್ತಾಯಿಸಿದೆ.
ಸ್ಥಳೀಯ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಕನ್ನಡ ನಾಡಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವ ಜವಾಬ್ದಾರಿ ಕೂಡ ನಿಮ್ಮದಾಗಿದ್ದು, ಎಲ್ಲ ಅಂಗಡಿ ಮುಗ್ಗಟ್ಟುಗಳ ಮಾಲೀಕರನ್ನು ಕರೆಸಿ ಕನ್ನಡ ನಾಮ ಫಲಕ ಅಳವಡಿಸಲು ಎಚ್ಚರಿಕೆ ನೀಡಬೇಕು. ಕೇವಲ ವ್ಯಾಪಾರಿ ಅಂಗಡಿಗಳ ನಾಮಫಲಕ ಬದಲಾಯಿಸುವುದರಿಂದ ಕನ್ನಡ ಅನುಷ್ಠಾನಕ್ಕೆ ಬರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಜನಪದ ಸಾಹಿತ್ಯ ಪರಿಷತ್ತು ಮತ್ತು ಇತರ ಸಾಹಿತ್ಯ ಪರಿಷತ್ತುಗಳು, ಕನ್ನಡಪರ ಸಂಘಟನೆಗಳು ಕನ್ನಡ ಅನುಷ್ಠಾನಕ್ಕೆ ತರಲು ಶ್ರಮಿಸಬೇಕಾಗಿದೆ. ಶಾಲಾ ಕಾಲೇಜುಗಳ ನಾಮಫಲಕ, ವಾಹನಗಳ ಸಂಖ್ಯೆ ಫಲಕ, ಕನ್ನಡದಲ್ಲಿ ಪತ್ರ ವ್ಯವಹಾರ, ನ್ಯಾಯಾಂಗ ವ್ಯವಸ್ಥೆ, ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಸಂಸ್ಥೆಗಳು ಸೇರಿ ಪ್ರತಿಯೊಂದರಲ್ಲಿ ಕಡ್ಡಾಯವಾಗಿ ಕನ್ನಡ ಅಳವಡಿಸುವಂತೆ ತಾವು ಸೂಚಿಸಬೇಕು.
ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪರವಾಗಿ ಮುಂದಿನ ದಿನಗಳಲ್ಲಿ ಔರಾದ ಪಟ್ಟಣದಲ್ಲಿ ಕನ್ನಡದ ಅಕ್ಷರಗಳು ಕಾಣದ ನಾಮಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕಾಧ್ಯಕ್ಷ ಅನೀಲ್ ದೇವ ಕತ್ತೆ, ನಗರಘಟಕ ಅಧ್ಯಕ್ಷ ಬಾಲಾಜಿ ದಾಮ, ತಾಲ್ಲೂಕು ಉಪಾಧ್ಯಕ್ಷ ನರ್ಸಿಂಗ್ ಹಕ್ಕೆ, ಆಕಾಶ ಮೇತ್ರಿ, ಪಾಂಡ್ರೆ, ಗಣೇಶ್, ನಾಗೇಶ್ ಸೇರಿದಂತೆ ಇತರರಿದ್ದರು.