ಔರಾದ್: ವಿಜಯ ಸಂಕಲ್ಪ ರಥಯಾತ್ರೆ ಶನಿವಾರ ಪಟ್ಟಣಕ್ಕೆ ಆಗಮಿಸಲಿದ್ದು, ಬೃಹತ್ ರೋಡ್ ಶೋ ಯಶಸ್ವಿಗೆ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ಯಾತ್ರೆ ನಿಮಿತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಜಗದೀಶ ಶೆಟ್ಟರ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಕ್ಷೇತ್ರದ ವಡಗಾಂವ, ಸಂತಪುರ ಮತ್ತು ಪಟ್ಟಣದಲ್ಲಿ ರೋಡ್ ಶೋ ನಡೆದ ನಂತರ ಗಣ್ಯರು ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ರೋಡ್ ಶೋನಲ್ಲಿ ಕನಿಷ್ಠ 20 ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಬೇಕು ಎಂದರು.
ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಾಜಿ ಶಾಸಕ ಅಮರನಾಥ ಪಾಟೀಲ, ಚುನಾವಣಾ ಪ್ರಭಾರಿ ವೀರಣ್ಣಾ ಕಾರಬಾರಿ, ಯಾತ್ರೆ ಸಂಚಾಲಕ ವಸಂತ ವಕೀಲ್, ಸುರೇಶ ಭೋಸ್ಥೆ, ಮುಖಂಡರಾದ ಶರಣಪ್ಪ ಪಂಚಾಕ್ಷರಿ, ಧೋಂಡಿಬಾ ನರೋಟೆ, ಗಿರೀಶ ವಡೆಯ, ಖಂಡೋಬಾ ಕಂಗಟೆ ಇತರರಿದ್ದರು.