ಔರಾದ: ಪಶು ಸಂಗೋಪನೆ ಸಚಿವ ಪ್ರಭು .ಬಿ ಚವ್ಹಾಣ ಔರಾದನ ಇತಿಹಾಸ ಪ್ರಸಿದ್ಧ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು ತಮಟೆ ಕಲಾವಿದರ ವಾದನಕ್ಕೆ ಭಕ್ತಾದಿಗಳೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಬಳಿಕ ಭಕ್ತಿ ಭಾವದೊಂದಿಗೆ ಅಗ್ನಿಕುಂಡಕ್ಕೆ ಸುತ್ತು ಹಾಕಿ ಭಕ್ತಿ ಮೆರೆದರು. ಪ್ರಸಾದ ವಿತರಣೆ ಸ್ಥಳಕ್ಕೆ ತೆರಳಿ ಸಚಿವರು ಭಕ್ತಾದಿಗಳಿಗೆ ತಮ್ಮ ಕೈಯಿಂದ ಪ್ರಸಾದ ವಿತರಿಸಿದರು. ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಸುಖ, ಶಾಂತಿ ನೀಡಿ ಕಾಪಾಡುವಂತೆ ಬೇಡಿಕೊಂಡರು.
ಬಳಿಕ ಮಾತನಾಡಿದ ಸಚಿವರು, ಔರಾದ ಪಟ್ಟಣದ ಪವಿತ್ರ ಧಾರ್ಮಿಕ ಕೇಂದ್ರ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಶ್ರೀ ಅಮರೇಶ್ವರರು ಭಕ್ತರ ಸಂಕಷ್ಟಗಳು ನಿವಾರಿಸಿ ಅವರೆಲ್ಲ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ಹೇಳಿದರು.
ಶ್ರೀ ಅಮರೇಶ್ವರರ ಆಶೀರ್ವಾದದಿಂದಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಅಮರೇಶ್ವರರ ಆಶೀರ್ವಾದದಿಂದಾಗಿ ಔರಾದನಲ್ಲಿ ಸುಖ, ಶಾಂತಿ ನೆಲೆಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದೊಂಡಿಬಾ ನರೋಟೆ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ, ಕೇರಬಾ ಪವಾರ, ಸಂತೋಷ ಪೋಕಲವಾರ, ರಾಮ ನರೋಟೆ, ಸೂರ್ಯಕಾಂತ ಅಲ್ಮಾಜೆ, ಪ್ರಕಾಶ ಘುಳೆ, ಶರಣಪ್ಪ ಪಂಚಾಕ್ಷರಿ, ಗುಂಡಪ್ಪ ಮುಧಾಳೆ, ಎಂ.ಡಿ ಸಲಾವುದ್ದೀನ್, ಹಣಮಂತ ಸುರನಾರ, ವೆಂಕಟರಾವ್ ಡೊಂಬಾಳೆ, ಶೇಷರಾವ ಕೋಳಿ ಹಾಗೂ ಇತರರಿದ್ದರು