ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಬೆಳಕುಣಿ.ಬಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಸಚಿವರು ಭೇಟಿ ನೀಡಿದ ವೇಳೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇರದೇ ಇರುವುದನ್ನು ಕಂಡು ಗರಂ ಆದ ಸಚಿವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. ಔರಾದ ಮತ್ತು ಕಮಲನಗರ ತಾಲ್ಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಇದಾಗಿದೆ. ಈ ಸೇತುವೆ ಶಿಥಿಲಗೊಂಡಿದ್ದರಿಂದ ಪ್ರತಿ ಬಾರಿ ಮಳೆಗಾಲದಲ್ಲಿ ನೀರು ರೈತರ ಹೊಲಗಳಿಗೆ ನುಗ್ಗಿ ಸಾಕಷ್ಟು ಬೆಳೆ ಹಾನಿ ಸಂಭವಿಸುತ್ತಿತ್ತು. ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತಿತ್ತು. ಹಾಗಾಗಿ ಸರ್ಕಾರದಿಂದ ವಿಶೇಷ ಅನುದಾನ ತರಿಸಿಕೊಂಡು ಕೆಲಸ ಆರಂಭಿಸಲಾಗಿದೆ. ಈ ಕೆಲಸ ಗುಣಮಟ್ಟದಿಂದ ಆಗಬೇಕು ಎಂದು ನಿರ್ದೇಶನ ನೀಡಿದರು.
ಈ ಕೆಲಸದ ಮೇಲೆ ನಿಗಾ ವಹಿಸಲುಅಧಿಕಾರಿಯೊಬ್ಬರನ್ನು ನೇಮಿಸಿ ಕೆಲಸ ಪೂರ್ಣಗೊಳ್ಳುವ ವರೆಗೆ ಕಾಮಗಾರಿ ಸ್ಥಳದಲ್ಲಿದ್ದು, ಕಾಮಗಾರಿ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಸಚಿವರು ಕಾಮಗಾರಿ ಕಳಪೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ದೊಂಡಿಬಾ ನರೋಟೆ, ಸಚಿನ್ ರಾಠೋಡ, ಹಣಮಂತ ಸುರನಾರ, ಖಂಡೋಬಾ ಕಂಗಟೆ ಹಾಗೂ ಇತರರು ಉಪಸ್ಥಿತರಿದ್ದರು.