ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಮಾರ್ಚ್ 12ರಂದು ಔರಾದ ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು 8.5 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಧೋಳ(ಬಿ) ಗ್ರಾಮದಲ್ಲಿ 321 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಹಸ್ಸಿಕೇರಾ ತಾಂಡಾದಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಬಸವನವಾಡಿ ತಾಂಡಾದಲ್ಲಿ 25 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಮಮದಾಪುರನಲ್ಲಿ 13 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ 80 ಲಕ್ಷ ಅನುದಾನದ ಜಲ ಜೀವನ ಮಿಷನ್ ಕಾಮಗಾರಿ, ರಾಯಪಳ್ಳಿ ಹಾಗೂ ಮೆಡಪಳ್ಳಿಯಲ್ಲಿ 13 ಲಕ್ಷ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಗುಡಪಳ್ಳಿಯಲ್ಲಿ 116.03 ಲಕ್ಷ, ಚಿಂತಾಮಣಿ ತಾಂಡಾದಲ್ಲಿ 20 ಲಕ್ಷ, ಏಕಲಾರ್ ನಲ್ಲಿ 127.11 ಲಕ್ಷ ಹಾಗೂ ಎಕಲಾರ ತಾಂಡಾದಲ್ಲಿ 88.42 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಬರ್ದಾಪೂರ ಗ್ರಾಮದಲ್ಲಿ 13 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಔರಾದ(ಬಿ) ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಮಕ್ಕಳಿಗೆ ಉತ್ತಮ ಶಾಲೆಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ದಿಶೆಯಲ್ಲಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಔರಾದ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಲ್ಪಿಸಲು ಕ್ಷೇತ್ರದಾದ್ಯಂತ ಜಲ ಜೀವನ ಮಿಷನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ಮನೆಗೆ ನೀರು ಒದಗಿಸಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ಜೆಜೆಎಂ ಕೆಲಸಗಳು ಸರಿಯಾಗಿ ನಡೆಯಬೇಕು. ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವ ಮೂಲಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ ದಾಳಗುಂಡೆ, ಮುಖಂಡರಾದ ಸುರೇಶ ಭೋಸ್ಲೆ, ವಸಂತ ಬಿರಾದಾರ, ಸತೀಶ ಪಾಟೀಲ, ದೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.