ಔರಾದ: ಜೀವನಕ್ಕೆ ಆಸರೆಯಾಗಿದ್ದ ಎಮ್ಮೆ ವಿದ್ಯುತ ತಂತಿ ತಗುಲಿ ಮೃತಪಟ್ಟಿದೆ. ಇಲಾಖೆಯಿಂದ ಪರಿಹಾರ ನೀಡುವಂತೆ ಎರಡು ವರ್ಷದಿಂದ ಕಚೇರಿಗೆ ಅಲೆಯುತ್ತಿದ್ದರೂ ಪರಿಹಾರ ನೀಡಿಲ್ಲ, ಪರಿಹಾರ ನೀಡಬೇಕು ಎಂದು ತೇಗಂಪುರದ ರೈತ ಅಂಬೀಷ ಜೆಸ್ಕಾಂ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಪಟ್ಟಣದ ಜೆಸ್ಕಾಂ ಉಪ ಕೇಂದ್ರದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಹಾಗೂ ಗ್ರಾಹಕರ ಕುಂದು ಕೊರತೆ ನಿವಾರಣಿ ಸಭೆಯಲ್ಲಿ ತಾಲೂಕಿನ ರೈತರು ತಮ್ಮ ಸಮಸ್ಯೆಗಳನ್ನು ಮನವಿ ಮಾಡಿಕೊಂಡರು. ಎರಡು ವರ್ಷದ ಹಿಂದೆ ಎಮ್ಮೆ ಮೃತಪಟ್ಟಿದೆ. ಜೀವನಕ್ಕೆ ಆಸರೆಯಾಗಿತ್ತು, ಇದೀಗ ಮಕ್ಕಳ ವಿದ್ಯಾಭ್ಯಾಸಕ್ಕೂ ಕಷ್ಟಕರವಾಗಿದೆ. ಔರಾದ್, ಬೀದರ್ ಕಚೇರಿಗೆ ಅಲೆದರೂ ಜೆಸ್ಕಾಂನವರು ಪರಿಹಾರ ನೀಡಿಲ್ಲ ಎಂದು ಅಳಲು ತೋಡಿಕೊಂಡರು.
ಜೆಸ್ಕಾಂ ಎಇಇ ರವಿಕುಮಾರ ಕಾರಬರಿ ಮಾತನಾಡಿ, ಎಮ್ಮೆ ಮೃತಪಟ್ಟ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು, ಖುದ್ದು ನಾನೇ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪರಿಹಾರ ದೊರಕಿಸುತ್ತೇನೆ ಎಂದು ಭರವಸೆ ನೀಡಿದರು.
ಪಟ್ಟಣದ ರೈತ ರಾಜಕುಮಾರ ಮಾರಕತ್ ಮಾತನಾಡಿ, ನಮ್ಮ ಜಮೀನಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದರು. ವಾರದಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದು ಎಇಇ ರವಿಕುಮಾರ ಭರವಸೆ ನೀಡಿದರು. ಗ್ರಾಹಕರ ಸಭೆಯಲ್ಲಿ ಪಟ್ಟಣ ಸೇರಿ ಗ್ರಾಮೀಣ ಭಾಗದ 100ಕ್ಕೂ ಹೆಚ್ಚಿನ ಸಮಸ್ಯೆಗಳು ಗಮನಕ್ಕೆ ಬಂದವು. 70 ಸಮಸ್ಯೆಗೆ ಸ್ಥಳದಲ್ಲೇ ಮುಕ್ತಿ ನೀಡಲಾಯಿತು. ಜೆಇಇ ಗಣಪತಿ, ಜೇಸ್ಕಾಂ ಸಿಬ್ಬಂದಿಗಳು, ಗ್ರಾಹಕರು ಸೇರಿದಂತೆ ಇತರರಿದ್ದರು.