ಔರಾದ: ಫೆಬ್ರುವರಿ 7ರಂದು ಮಂಗಳವಾರ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಸುಭಾಷ್ ಚಂದ್ರ ಬೋಸ್ ಯುವಕರ ಸಂಘದಿಂದ ರಾಜ್ಯ ಮದ್ಯಪಾನ ಸಂಯಮ ಪ್ರಶಸ್ತಿ ಪುರಸ್ಕೃತ ಗುರುಬಸವ ಪಟ್ಟದೇವರ ಅಭಿನಂದನಾ ಸಮಾರಂಭ ಹಾಗೂ ತಾಲೂಕಿನ ವಿದ್ಯಾರ್ಥಿಗಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ಮತ್ತು ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆದರ್ಶ ವಿದ್ಯಾಲಯ ಶಾಲೆಯ ಪ್ರಾಂಶುಪಾಲ ಧೂಳಪ್ಪ ಮಳೆನೂರ ಹೇಳಿದರು.
ಪಟ್ಟಣದ ಚನ್ನಬಸವ ಪಟ್ಟದೇವರು ಐಟಿಐ ಕಾಲೇಜಿನಲ್ಲಿ ನಡೆದ ಪೋಸ್ಟರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಭಾಷ್ ಚಂದ್ರಬೋಸ್ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಮಾತನಾಡಿ, ಭಾಲ್ಕಿ ಶ್ರೀಗಳಿಗೆ ಅಭಿನಂದನಾ ಸಮಾರಂಭದೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವೇಶ್ವರ ಇಡಿ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ನೌಬಾದೆ, ಮುಖ್ಯಗುರು ನಿರ್ಮಲಾ ಶೇರಿಕಾರ, ಇಂದಿರಾಗಾಂಧಿ ಪ್ರೌಢಶಾಲೆಯ ಮುಖ್ಯಗುರು ಪ್ರಭುಲಿಂಗ ಮಾತನಾಡಿದರು. ಐಟಿಐ ಕಾಲೇಜಿನ ಪ್ರಾಂಶುಪಾಲ ಸತೀಶ್ ಗಂದಿಗುಡೆ ಅಧ್ಯಕ್ಷತೆ ವಹಿಸಿದರು.
ಶಾಹಿನ್ ಕಾಲೇಜಿನ ಉಪನ್ಯಾಸಕ ರಾಜಶೇಖರ್, ಪತ್ರಿಸ್ವಾಮಿ ಪ್ರೌಢಶಾಲೆಯ ಪ್ರಾಂಶುಪಾಲ ಅಖಿಲ್, ಮುಖ್ಯಗುರು ಅನ್ವರ್ ಸುಲ್ತಾನ, ಇಂದುಮತಿ ಎಡವೆ, ನಾಗನಾಥ ಪಾಟೀಲ, ಬಾಲಾಜಿ, ಸುನೀಲ, ರಾಹುಲ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು.