ಔರಾದ: ಸುಮಾರು ವರ್ಷಗಳಿಂದ ಏಕತಾ ಫೌಂಡೇಶನ್ ಸಂಸ್ಥೆಯು ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತ ಬಂದಿದೆ. ಕಮಲನಗರ ತಾಲೂಕಿನ ರಾಮಭಕ್ತರ ಇಚ್ಛೆಯ ಮೇರೆಗೆ, ಏಕತಾ ಫೌಂಡೇಶನ್ ವತಿಯಿಂದ ಶ್ರೀರಾಮ ನವಮಿ ಆಚರಣೆ ಮಾಡಲು ಏಪ್ರಿಲ್ 1ರಂದು ನಿರ್ಧಾರ ಮಾಡಲಾಗಿತ್ತು. ಆದರೆ ಶೋಭಾಯಾತ್ರೆಗೆ ಹಾಗೂ ರಾಮಭಕ್ತರಿಗೆ ಅವಮಾನ ಮಾಡಲಾಗಿದೆ ಎಂದು ಕಮಲನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರವೀಂದ್ರ ಸ್ವಾಮಿಯವರು ಆರೋಪಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಭಾಲ್ಕಿಯಲ್ಲಿ, ಶ್ರೀ ರಾಮ ನವಮಿ ನಿಮಿತ್ಯ ಭಕ್ತರ ಸಮ್ಮುಖದಲ್ಲಿ ಶ್ರೀ ರಾಮರ ಭವ್ಯ ಮೂರ್ತಿಯ ಮೆರವಣಿಗೆ ನಡೆಸಲು ಅನುಮತಿ ಸಿಗುತ್ತೆ. ಡಿಜೆ ಅಳವಡಿಸಲು ಅನುಮತಿ ಸಿಗುತ್ತೆ, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಸೇರಲು ಅನುಮತಿ ಸಿಗುತ್ತೆ. ಆದರೆ ಕಮಲನಗರದಲ್ಲಿ ಮಾತ್ರ ಇದಕ್ಕೆಲ್ಲಾ ಅನುಮತಿ ಸಿಗುವುದಿಲ್ಲ, ಯಾಕೆ? ಶ್ರೀರಾಮ ನವಮಿ ಆಚರಿಸಲು ಆಗದಿರುವಂತಹ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದು ಯಾಕೆ? ಎಂಬುದು ನನ್ನ ಜೊತೆಗೆ ಸಾವಿರಾರು ರಾಮಭಕ್ತರ ಪ್ರಶ್ನೆಯಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ದಿನಾಂಕ ನಿಗದಿಯಾಗುವುದಕ್ಕಿಂತ ಮೊದಲೇ ಏಕತಾ ಫೌಂಡೇಶನ್ ವತಿಯಿಂದ, ಫೌಂಡೇಶನ್ ಕಾರ್ಯಕರ್ತರು ಶ್ರೀರಾಮ ನವಮಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಇಲಾಖೆಯ ಕೆಲವು ಅಧಿಕಾರಿಗಳು ಶಾಸಕ ಪ್ರಭು ಚವ್ಹಾಣ್ ರವರ ಕೈಗೊಂಬೆಯಂತೆ ವರ್ತಿಸುತ್ತಿರುವ ಕಾರಣ ಶ್ರೀರಾಮ ನವಮಿಯನ್ನು ಮುಕ್ತವಾಗಿ ಆಚರಿಸಲು ತಡೆ ಒಡ್ಡಿದ್ದರು. ಅಂತಹ ಅಧಿಕಾರಿಗಳ ಹೆಸರುಗಳನ್ನು ಪಟ್ಟಿ ಮಾಡಿ ಶೀಘ್ರವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಸಾರ್ವಜನಿಕ ಸೇವೆಯಲ್ಲಿರುವವರು, ಸಂಬಳ ಸರ್ಕಾರದಿಂದ ಪಡೆದು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದರಲ್ಲದೇ, ಇಂತಹ ಅಧಿಕಾರಿಗಳಿಂದ ಔರಾದ್ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು ಇಂತಹ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಶ್ರೀ ಸೇವಾಲಾಲ ಜಯಂತಿ ಹಾಗೂ ಇನ್ನಿತರ ಸರ್ಕಾರದ ಜಯಂತಿ ಕಾರ್ಯಕ್ರಮಗಳಲ್ಲಿ ಶಾಸಕರಿಗೆ ಕರೆಸಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಶಾಸಕರ ಮಗನಿಗೆ ಕರೆಸುತ್ತಾರೆ. ಇದೆಂಥಾ ವಿಚಿತ್ರ? ಇಷ್ಟು ದಿವಸ ಶಾಸಕರು ಹಾಗೂ ಕೆಲವು ಅಧಿಕಾರಿಗಳು ದರ್ಬಾರ್ ಮಾಡಿದ್ದು ಸಾಕು. ಇನ್ಮುಂದೆ ಎಲ್ಲರಿಗೂ ಸಮನಾದ ನಿಯಮಗಳನ್ನು ಜಾರಿಗೆ ತರಬೇಕೆಂದು ಈ ವೇಳೆ ರವೀಂದ್ರ ಸ್ವಾಮಿಯವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೋಮನಾಥ ಸ್ವಾಮಿ ಮುಧೋಳಕರ ಸೇರಿದಂತೆ ಹಲವರಿದ್ದರು.