ಔರಾದ: 12ನೇ ಶತಮಾನದಲ್ಲಿ ನಡೆ-ನುಡಿ ಒಂದಾಗಿಸಿಕೊಂಡು ದೈವಭಕ್ತನಾಗಿರದೆ, ಮಾನವೀಯತೆ ಸಾಕಾರಗೊಳಿಸುವ ಸಾಕ್ಷಾತ್ ಮೂರ್ತಿ ಸಿದ್ದರಾಮೇಶ್ವರರು ಎಂದು ಒಡೆಯರ್ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್ ಒಡೆಯರ್ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವಾಲಯ ನಿರ್ಮಾಣ ಮಾತ್ರ ಸೀಮಿತವಾಗಿರದೆ, ಸಮಾಜೋದ್ಧಾರ್ಮಿಕ ಕಾರ್ಯಕ್ಕಾಗಿ ತನ್ನ ಬದುಕನ್ನು ಮೀಸಲಿಟ್ಟವರು. ಭೂಮಿಯ ಮೇಲಿನ ಸಕಲ ಜೀವರಾಶಿಗಳನ್ನು ಲೇಸನ್ನೇ ಬಯಸಿದವರು ಸಿದ್ದರಾಮೇಶ್ವರರು ಎಂದರು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಅಜಯಕುಮಾರ ದುಬೆ ಮಾತನಾಡ, ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ವಿದ್ಯಾರ್ಥಿ ಜೀವನ ಸಾಗಬೇಕು ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮೇಶ್ವರರವರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಅಂಜಲಿ ಶಿವಕುಮಾರ, ಪೂಜಾ ಹಣಮ್ಮಾರೆಡ್ಡಿ, ಶಾಯಿಸ್ತಾ ಗಫಾರ್ ಖಾನ್ ವಿಜೇತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಮತ್ತು ಇತರರು ಉಪಸ್ಥಿತರಿದ್ದರು.