ಔರಾದ: ಬೇಸಿಗೆ ಆರಂಭವಾಗಿದ್ದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ತುರ್ತಾಗಿ ಪರಿಹರಿಸಿ ಎಲ್ಲಿಯೂ ನೀರಿನ ಕೊರತೆಯಾಗಂತೆ ನೋಡಿಕೊಳ್ಳಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನೀರಿನ ಸಮಸ್ಯೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಔರಾದ(ಬಿ) ಕ್ಷೇತ್ರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆಯಿದೆ? ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಎದುರಾಗಬಹುದಾದ ಗ್ರಾಮಗಳು ಮತ್ತು ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ತೀವ್ರ ಸಮಸ್ಯೆಯಿರುವ ಕಡೆಗಳಲ್ಲಿ ವಿಳಂಬ ಮಾಡದೆ ತುರ್ತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಬೇಸಿಗೆ ಮುಗಿಯುವವರೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೆಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಸ್ಪಂದಿಸಬೇಕು. ನೀರಿನ ಸಮಸ್ಯೆಯಿರುವ ಕಡೆಗಳಲ್ಲಿ ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಪ್ರಯತ್ನಿಸಬೇಕು ಅತ್ಯವಶ್ಯಕ ಎನಿಸುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಔರಾದ(ಬಿ) ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಕುರಿತಂತೆ ಸಾಕಷ್ಟು ದೂರುಗಳು ಬರುತ್ತಿವೆ. ನೀರು ಸರಬರಾಜು ಕೊಳವೆಗಳಲ್ಲಿ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಇದರಿಂದಾಗಿ ಕೆಲವೆಡೆ ಕುಡಿಯುವ ನೀರಿಗಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎನ್ನುವ ಸಾಕಷ್ಟು ದೂರುಗಳು ಬರುತ್ತಿವೆ. ಬೇಗ ಸಮಸ್ಯೆ ಪತ್ತೆ ಹಚ್ಚಿ ಪಟ್ಟಣದಾದ್ಯಂತ ಶುದ್ಧ ಕುಡಿಯುವ ನೀರು ಪೂರೈಸಬೇಕು. ಈ ವಿಷಯದಲ್ಲಿ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.
ಜಲ ಜೀವನ ಮಿಷನ್ ಯೋಜನೆಯಡಿ ಕ್ಷೇತ್ರದಲ್ಲಿ 200 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬಾಕಿಯಿರುವ ಕೆಲಸಗಳು ಶೀಘ್ರ ಪೂರ್ಣಗೊಳಿಸಿ ಜನತೆಗೆ ಅನುಕುಲ ಮಾಡಿಕೊಡಬೇಕು. ಇದು ಮಹತ್ವದ ಯೋಜನೆಯಾಗಿರುವುದರಿಂದ ಎಲ್ಲಿಯೂ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಸಮರ್ಪಕ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಕಾಮಗಾರಿ ಅಧೀನಕ್ಕೆ ಪಡೆಯಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯನಗುಂದಾ, ಸುಂದ್ಯಾಳ ಮತ್ತು ನಂದ್ಯಾಳ ಹಾಗೂ ಇನ್ನಿತರ ಗ್ರಾಮಗಳಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿಯ ಬಗ್ಗೆ ದೂರುಗಳು ಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ವಸತಿ ಯೋಜನೆಯ ಕುರಿತು ಪ್ರಗತಿ ಪರಿಶೀಲನೆ ನಡಸಿದ ಸಚಿವರು, ಮಾರ್ಚ್ ನಂತರ ಅನುದಾನ ಮರಳಿ ಹೋಗುವುದರಿಂದ ಕೂಡಲೇ ಎಲ್ಲ ಗ್ರಾಮಗಳಲ್ಲಿ ಮನೆ ಹಂಚಿಕೆ ಕೆಲಸ ಪೂರ್ಣಗೊಳಿಸಬೇಕು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮುತುವರ್ಜಿ ಯೋಜನೆ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಹಣ ಮರಳಿ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಸಿದರು.