ಔರಾದ: ಕಮಲನಗರದ ಮಹಾತ್ಮ ಗಾಂಧಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಪ್ರಥಮ ಕಮಲನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಪುಷ್ಪಗಳಿಂದ ಅಲಂಕೃತ ಸರ್ವಾಧ್ಯಕ್ಷರ ರಥಕ್ಕೆ ಬೀದರ್ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಟೊಣ್ಣೆ ಚಾಲನೆ ನೀಡಿದರು. ಮಹಾತ್ಮ ಗಾಂಧಿ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಝುಲ್ಫೆ ರಾಷ್ಟ್ರ ಧ್ವಜ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಕನ್ನಡ ಧ್ವಜ ಹಾರಿಸಿದರು. ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷ ಗುರುಬಸವ ಪಟ್ಟದ್ದೇವರಿಗೆ ಮಠದ ಭಕ್ತರು ಸನ್ಮಾನಿಸಿ, ಗೌರವಿಸಿದರು.
ಮೆರವಣಿಗೆ ಗ್ರಾಮದ ಅಕ್ಕಮಹಾದೇವಿ ವೃತ್ತ, ಬಸವೇಶ್ವರ ವೃತ್ತ, ಅಲ್ಲಮ ಪ್ರಭು ವೃತ್ತ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕನ್ನಡಾಭಿಮಾನಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಕನ್ನಡಾಂಬೆಗೆ ಜೈ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಘೋಷಣೆಗಳನ್ನು ಕೂಗಿದರು. ಡೊಳ್ಳು ಕುಣಿತ, ಶಾಲಾ ಮಕ್ಕಳ ಲೇಝಿಮ್, ಕೋಲಾಟ, ಮಹಾತ್ಮರ ವೇಷ ಧರಿಸಿದ್ದ ಮಕ್ಕಳು ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.