ಔರಾದ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರಿಗೆ ಅವಶ್ಯವಿರುವ ಟ್ಯುಶನ್ ಕ್ಲಾಸ್ ನಡೆಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ ಅಭಿಪ್ರಾಯಪಟ್ಟರು.
ಪಟ್ಟಣದ ನಾಲಂದಾ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಔರಾದ ತಾಲೂಕು ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೆಮಾವತಿ ಹೆಗ್ಗಡೆ ಅವರ ಮಹಿಳಾ ಜ್ಞಾನ ವಿಕಾಸ ಕೇಂದ್ರ ಯೋಜನೆಯಡಿಯಲ್ಲಿ ನಡೆದ ಟ್ಯುಶನ್ ಕ್ಲಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ. ಹೆಗ್ಗಡೆ ಅವರ ಬಯಕೆ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಬೇಕೆನ್ನುವುದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕೃಷಿ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಕಾರ್ಯ ಮಾದರಿ, ಶಿಕ್ಷಕರಿಲ್ಲದ ಶಾಲೆಗಳಿಗೆ ಶಿಕ್ಷಕರನ್ನು ನೀಡಿ, ಅನೇಕ ಶಾಲಾ ಕಾಲೇಜುಗಳಿಗೆ ಪಿಠೋಪಕರಣಗಳು, ಸಾಹಿತ್ಯ ನೀಡುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮಾಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಔರಾದನ ಯೋಜನಾಧಿಕಾರಿ ರಾಘವೇಂದ್ರ ಅವರು ಮಾತನಾಡಿ, ಆರು ವರ್ಷಗಳಿಂದ ಹೊಸ ಕ್ರಾಂತಿಗೆ ಹೆಜ್ಜೆ ಹಾಕಿರುವ ನಮ್ಮ ಸಂಸ್ಥೆಯು ಚತುರ್ದಾನಗಳಲ್ಲಿ ಒಂದಾದ ಜ್ಞಾನ ದಾನವು ಬಹು ದೊಡ್ಡದು ಎಂದು ಅರಿತು ವಿಶೇಷವಾಗಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಈ ವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟ್ಯುಶನ್ ಕ್ಲಾಸ್ ಉಚಿತವಾಗಿ ನಡೆಸುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನಾಲಂದಾ ಶಾಲೆಯ ಮುಖ್ಯ ಶಿಕ್ಷಕ ವಿಶಂಬರ ಕಾಂಬಳೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಲೋಕೇಶ ಭಾಲ್ಕೆ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ, ಗುರುಪ್ರಸಾದ, ನಾಗನಾಥ ಚಿಟ್ಮೆ, ಜಗನ್ನಾಥ ಬಿರಾದಾರ, ಸತ್ಯವಾನ ಬಿರಾದಾರ, ದೀಲಿಪ ಮೇತ್ರೆ, ಪತ್ರಕರ್ತರಾದ ಸಂತೋಷ ಚ್ಯಾಂಡೆಸುರೆ, ಅಮರಸ್ವಾಮಿ ಸ್ಥಾವರಮಠ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.