ಔರಾದ: ತಾಲ್ಲೂಕಿನ ಹಂಗರಗಾ-ಸಾವರಗಾಂವ್ ಮಧ್ಯೆ ನಿರ್ಮಿಸಲು ಉದ್ದೇಶಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಕೆಲವರು ಅನಗತ್ಯವಾಗಿ ತಡೆ ಒಡ್ಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಸಂತ ಬಿರಾದಾರ ಪ್ರತ್ಯಾರೋಪ ಮಾಡಿದ್ದಾರೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಮೀಕ್ಷೆ ನಡೆಸಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಬೆಂಗಳೂರಿನ ತಾಂತ್ರಿಕ ಸಲಹಾ ಸಮಿತಿಯಿಂದ ಅನುಮೋದನೆ ಪಡೆದ ನಂತರ ಶಾಸಕರು ಅನುದಾನ ಮೀಸಲಿರಿಸಿದ್ದಾರೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು. ಈ ಬ್ಯಾರೇಜ್‌ನಿಂದ ಹೊಕ್ರಾಣಾ, ಖೇರ್ಡಾ, ಬಾವಲಗಾಂವ್, ಸಾವರಗಾಂವ್, ಹಂಗರಗಾ, ಘಮಸುಬಾಯಿ ತಾಂಡಾ, ರಾಮಸಿಂಗ್ ತಾಂಡಾ, ಕರಂಜಾ ತಾಂಡಾ, ಬೋಂತಿ ತಾಂಡಾ, ಬೋಂತಿ, ಲಿಂಗಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 25 ಸಾವಿರ ಜನರಿಗೆ ಅನುಕೂಲವಾಗಲಿದೆ. 5 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.
ಬ್ಯಾರೇಜ್ ನಿರ್ಮಾಣದಿಂದ 67 ಎಕರೆ ಎಕರೆ ಭೂಮಿ ಮುಳುಗಡೆ ಆಗಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಶಾಸಕರ ಹಾಗೂ ಅವರ ಸಂಬಂಧಿಗಳ ಜಮೀನುಗಳೂ ಮುಳುಗಡೆಯಾಗಲಿವೆ. ಬ್ಯಾರೇಜ್ ಕಾಮಗಾರಿಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಅನುಕೂಲವಾಗುತ್ತದೆ ಎನ್ನುವುದು ಶುದ್ಧ ಸುಳ್ಳು ಎಂದರು.
ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಮಾಣಿಕರಾವ್ ಪಾಟೀಲ, ಬಾಪುಸಾಬ ಪಾಟೀಲ, ಗುರುಪಾದಪ್ಪ ನಾಗಮಾರಪಳ್ಳಿ, ಗುಂಡಪ್ಪ ವಕೀಲ ಸೇರಿದಂತೆ ಹಲವರು ಯತ್ನಿಸಿದ್ದಾರೆ. ಸಚಿವ ಪ್ರಭು ಚವಾಣ್ ಅವರು ಸತತವಾಗಿ ಪ್ರಯತ್ನ ನಡೆಸಿ ಅನುಮೋದನೆ ಪಡೆದಿದ್ದಾರೆ ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಸಂಪೂರ್ಣ ಆನ್‍ಲೈನ್ ಮೂಲಕ ನಡೆಯುತ್ತದೆ. ಅರ್ಹ ಯಾವುದೇ ಗುತ್ತಿಗೆದಾರರು ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾಮಗಾರಿ ವಹಿಸುತ್ತಾರೆ. ಬೋಗಸ್ ಟೆಂಡರ್ ಇದೆ ಎಂದು ಆರೋಪಿಸಿರುವುದು ಹುಸಿಯಾಗಿದೆ ಎಂದು ತಿಳಿಸಿದರು. ಯಾರು ಎಷ್ಟೇ ಪ್ರಯತ್ನಪಟ್ಟರೂ ವಿಧಾನಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದರೂ ಬಿಜೆಪಿಯಿಂದ ಪ್ರಭು ಚವಾಣ್ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ವಕೀಲರಾದ ಬಲಭೀಮ ನಾಯಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಚಿನ್ ರಾಠೋಡ್, ಮುಖಂಡರಾದ ಸತೀಶ ಪಾಟೀಲ, ಉಮೇಶ ನಾಯಕ್, ಬಾಲಾಜಿ ನಾಯಕ್, ಪ್ರಶಾಂತ ರೆಡ್ಡಿ, ಬೋಂತಿ, ಹೊಕ್ರಾಣಾ, ಖೇರ್ಡಾ, ಭಂಡಾರಕುಮಟಾದ ಪ್ರಮುಖರು ಇದ್ದರು.