ಔರಾದ: ಸ್ವಾಮಿ ವಿವೇಕಾನಂದರು ಎಲ್ಲರಿಗೂ ಸ್ಫೂರ್ತಿ, ದಾರಿ ದೀಪ. ಇವರ ಬದುಕಿನ ಮೌಲ್ಯ ಸಂದೇಶಗಳು ಇಂದಿಗೂ ಪ್ರಸ್ತುತ. ಜಗತ್ತಿಗೆ ಜ್ಞಾನದ ಬೆಳಕನ್ನು ಹರಿಸಿದ ಗುರುಗಳು ವಿವೇಕಾನಂದರು ಎಂದು ಸಾಹಿತಿ ಗೀತಾ ವಿಜಯಕುಮಾರ ನುಡಿದರು.
ತಾಲೂಕಿನ ಸಂತಪೂರ ಗ್ರಾಮದ ಸಿದ್ಥರಾಮೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರ ತುಗಾಂವ, ಭಾರತ ಯುತ್ ವೆಲಫೇರ್ ಎಜುಕೇಷನ್ ಆ್ಯಂಡ್ ರೂರಲ ಡೆವಲಪಮೆಂಟ್ ಸೊಸೈಟಿ ಬೀದರ, ಸಿದ್ಥರಾಮೇಶ್ವರ ಪದವಿ ಪೂರ್ವ ಕಾಲೇಜು ಸಂತಪೂರ ಹಾಗೂ ಬಸವೇಶ್ವರ ಯುವಕ ಸಂಘ ಯನಗುಂದಾ ಇವರ ಸಹಯೋಗದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಾತನಾಡಿದ ಅವರು, ವೀರ ಸನ್ಯಾಸಿ ವಿವೇಕಾನಂದರು ಕಡಲಿನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು. ಯುವಜನತೆಯ ಹೃದಯಮಂದಿರದಲ್ಲಿ ಶೌರ್ಯ ಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶದಾದ್ಯಂತ ಸಂಚರಿಸಿದರು. ಇಂದಿನ ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
ಯುವ ಪೀಳಿಗೆ ಮೊಬೈಲ್ ಬಳಕೆಯಲ್ಲಿ ಹೆಚ್ಚಾಗಿ ತೊಡಗಿದ್ದಾರೆ ಅದನ್ನು ಬಿಟ್ಟು ಸ್ವಾಮಿ ವಿವೇಕಾನಂದರ ಹಾಗೂ ಮಹಾನ ದಾರ್ಶನಿಕರ ಪುಸ್ತಕಗಳು ಓದುವ ಮೂಲಕ ಅವರ ಆದರ್ಶ ಮೈಗೂಡಿಸಿಕೊಂಡು ಬದುಕಬೇಕೆಂದರು. ಕಾಲೇಜಿನ ಪ್ರಾಚಾರ್ಯ ನವೀಲಕುಮಾರ ಉತ್ಕಾರ ಮಾತನಾಡಿ, ವಿವೇಕಾನಂದರು ಒಬ್ಬ ವ್ಯಕ್ತಿಯಾಗಿ ಬದುಕದೇ ಈ ದೇಶದ ಯುವಜನರ ಶಕ್ತಿಯಾಗಿ ಹೊರ ಹೊಮ್ಮಿದರು. ಹಿಂದು ಧರ್ಮವನ್ನು ಹಾಗೂ ಭಾರತದ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಬಿತ್ತರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ವಾರಸುದಾರರಾದ ನಾವು ವಿವೇಕಾನಂದರ ತ್ಯಾಗ ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯಗಳಾಗಿ ನಿರ್ಮಾಣವಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಂಭುಲಿಂಗ ವಾಲ್ದೊಡ್ಡಿ, ಸಾಹಿತಿ ನಾಗೇಶ್ ಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶಿವಕುಮಾರ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಔರಾದ್ ತಾಲೂಕಾಧ್ಯಕ್ಷ ರವಿಂದ್ರ ಮುಕ್ತೆದಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ ಚೆಟ್ಟಿ, ತಾಲೂಕು ಖಜಾಂಚಿ ಅಮರ ಸ್ವಾಮಿ ಸ್ಥಾವರಮಠ ಹಾಗೂ ತಾಲೂಕು ಕಾರ್ಯಕಾರಿ ಸದಸ್ಯ ಸಂತೋಷ ಚಾಂಡೇಶ್ವರೆ, ಕಾಲೇಜಿನ ಉಪನ್ಯಾಸಕ ಕಲ್ಲಪ್ಪ ಬುಟ್ಟೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.