ಔರಾದ: ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನಿಲ್ ಹೆಡೆ ನೇತೃತ್ವದಲ್ಲಿ ತಾಲೂಕು ಉಪ ನೋಂದಣಿ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಉಪನೊಂದನಾಧಿಕಾರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ನಂತರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ವಕ್ತಾರ ಹಣಮಂತ ದೇಶಮುಖ್ ಮಾತನಾಡಿ, ಔರಾದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಕೂಲಿ ಕಾರ್ಮಿಕರ ಮತ್ತು ರೈತರ ಕೆಲಸಗಳು ಲಂಚ ಇಲ್ಲದೆ ಯಾವುದೇ ಸರ್ಕಾರಿ ಕೆಲಸಗಳು ಆಗುತ್ತಿಲ್ಲ, ನಿಯತ್ತಿನಿಂದ ಕೆಲಸ ಮಾಡಬೇಕು ಇಲ್ಲ ಕುರ್ಚಿ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಕೂಡಲೇ ಉಪನೋಂದಣಾಧಿಕಾರಿಗೆ ವರ್ಗಾವಣೆಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಕರವೇ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಹೇಶ್ ಸ್ವಾಮಿ, ವಿವೇಕ್ ನಿರ್ಮಳೆ, ಅಮಿತ್ ಶಿವಪೂಜೆ, ಬಾಲಾಜಿ ಧಾಮ, ಚಂದು ಡಿಕೆ, ಶಿವು ದೇಶಮುಖ್, ಇರ್ಷಾದ್, ಸಂತೋಷ್ ಚವ್ಹಾಣ, ಹರೀಶ್, ಸತೀಶ್ ಫುಲ್ಲರಿ ಅನೇಕರು ಉಪಸ್ಥಿತರಿದ್ದರು.