ಔರಾದ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪ್ರಭು ಚೌಹಾಣ್ ಸುಪುತ್ರ ಪ್ರತೀಕ್ ಚೌಹಾಣ್ ಅವರಿಗೆ ಮುತ್ತಿಗೆ ಹಾಕಿದ ಘಟನೆ ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ನಡೆದಿದೆ.
ಸಾರ್ವಜನಿಕರ ಭೇಟಿ ಹಾಗೂ ಔರಾದ ಕ್ಷೇತ್ರದ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲು ವಡಗಾಂವ ದೇ ಗ್ರಾಮಕ್ಕೆ ಆಗಮಿಸಿದಾಗ ಈ ಘಟನೆ ಜರುಗಿದೆ. ಜೆ.ಜೆ.ಎಮ್ ಕೆಲಸ ಆರಂಭವಾಗಿ ಸುಮಾರು ನಾಲ್ಕರಿಂದ ಐದು ತಿಂಗಳು ಕಳೆದಿವೆ. ಐದು ತಿಂಗಳಿಂದ ವಾರ್ಡ್ ನಂ.1 ರಲ್ಲಿ ಹನಿ ನೀರಿಲ್ಲದೆ ಜನರು ಪರದಾಡುತ್ತಿದ್ದೇವೆ. ಗ್ರಾಪಂ ಪಿಡಿಓ ಹಾಗೂ ಅಧ್ಯಕ್ಷ, ಸದಸ್ಯರಿಗೆ ನಮ್ಮ ಸಮಸ್ಯೆ ಹೇಳಿದರು ಯಾವುದೇ ಪ್ರಯೋಜನ ವಾಗಿಲ್ಲ, ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಮಹಿಳೆಯರು ಆಕ್ರೋಶ ಹೊರ ಹಾಕಿದರು.
ಜನರ ಸಮಸ್ಯೆ ಕೇಳುವುದಕ್ಕಾಗಿ ನಾನು ಗ್ರಾಮ ಸಂಚಾರ ಮಾಡುತ್ತಿದ್ದೇನೆ. ಒಂದು ವಾರದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಪ್ರತೀಕ್ ಚೌಹಾಣ್ ಭರವಸೆ ನೀಡಿದರು. ಒಂದು ವಾರದಲ್ಲಿ ನಮ್ಮ ಗ್ರಾಮಕ್ಕೆ ನೀರು ಬರದಿದ್ದರೆ ನಿಮ್ಮ ಮನೆಗೆ ಬಂದು ಮುತ್ತಿಗೆ ಹಾಕುತ್ತೇವೆ ಎಂದು ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದರು.