ಔರಾದ: ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದೆ ಪ್ರಸಿದ್ಧರಾದವರೂ ಭಗವಾನ ಗೌತಮ ಬುದ್ದ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಹೇಳಿದರು.
ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಭಗವಾನ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶುದ್ಧ ಚಾರಿತ್ಯದ ಸಾಕಾರಮೂರ್ತಿ, ಮಂದಸ್ಮಿತಿ ವದನದಿಂದಲೇ ರಾಕ್ಷಸನನ್ನು ಶರಣ ಮಾಡಿದ ಶಕ್ತಿ. ಜೀವನದ ಕೊನೆ ಗಳಿಗೆಯವರೆಗೂ ಕೂಡ ಧ್ಯಾನ, ಮೌನ, ಜೀವನ ಪ್ರೀತಿಯನ್ನು ಬೋಧಿಸಿದ ಕರುಣಾ ಮೂರ್ತಿ ಬುದ್ಧ, ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿಲ್ಲ. ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿ, ಜಗತ್ತಿಗೆ ಗುರುವಾದವರು. ಅರಸೊತ್ತಿಗೆಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಆಚರಿಸಿ, ವಿರಾಗಿಯಾಗಿ ಭರತ ಖಂಡದುದ್ದಕ್ಕೂ ಶಾಂತಿ, ಅಹಿಂಸೆಯ ಬಗ್ಗೆ ಸಾರಿದರು.
ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ, ಧ್ಯಾನ, ದಾನ ಜೀವನದ ಬಗ್ಗೆ ಸದಾಕಾಲ ಚಿಂತಿಸಿ ಅದನ್ನು ಜನರಿಗೆ ತಿಳಿಸಿ ಅಪಾರ ಅನುಯಾಯಿಗಳನ್ನುಗಳಿಸಿಕೊಂಡವರು. ಬುದ್ಧನ ಚಿಂತನೆಗಳಿಗೆ ಮಾರು ಹೋಗದವರೇ ಇಲ್ಲ, ಜನರು ಬದುಕಿನಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಭಂತೆ ಭದಂತ ಧಮ್ಮನಾಗ, ಹೆಡಗಾಪೂರದ ಗ್ರಾಪಂನ ಅಧ್ಯಕ್ಷೆ ಸರಸ್ವತಿ ಅಪ್ಪಾರಾವ್ ಪಾಟೀಲ, ಡಾ.ಟಿ.ಆರ್.ದೊಡ್ಡ, ಪ್ರೊ. ವಿಠಲದಾಸ ಪ್ಯಾಗೆ, ದಾದಾರಾವ್ ಖರತ, ಶ್ರೀ ದತ್ತು ಡೊಂಗರೆ, ರಾಹುಲ ಕಾಂಬಳೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.