ಔರಾದ: ಔರಾದ(ಬಿ) ಪಟ್ಟಣದಲ್ಲಿ 2 ಕೋಟಿ ಅನುದಾನದಲ್ಲಿ ಭವ್ಯ ಮರಾಠಾ ಭವನ ನಿರ್ಮಾಣಗೊಳ್ಳಲಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ತಿಳಿಸಿದರು. ಔರಾದ(ಬಿ) ಪಟ್ಟಣದ ಹೊರ ವಲಯದಲ್ಲಿ ರವಿವಾರ ಮರಾಠಾ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.
ಪಟ್ಟಣದಲ್ಲಿ ಎಲ್ಲ ಸಮಾಜಗಳ ಭವನಗಳನ್ನು ನಿರ್ಮಿಸಲಾಗುತ್ತಿದೆ. ಮರಾಠಾ ಭವನ ನಿರ್ಮಿಸುವುದು ಬಾಕಿ ಇತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ಭವನ ನಿರ್ಮಾಣಕ್ಕೆ ಇದ್ದ ಎಲ್ಲ ತೊಡಕುಗಳು ನಿವಾರಣೆಯಾಗಿದ್ದು 2 ಕೋಟಿ ವೆಚ್ಚದಲ್ಲಿ ಸುಂದರ ಭವನ ನಿರ್ಮಾಣವಾಗಲಿದೆ. ಸಮಾಜ ಬಾಂಧವರು ಸಭೆ ಸಮಾರಂಭಗಳನ್ನು ಮತ್ತು ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು. ಹಣ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಸುಂದರವಾದ ಭವನ ನಿರ್ಮಾಣವಾಗಬೇಕು. ಕಟ್ಟಡಕ್ಕೆ ಅವಶ್ಯಕತೆಯಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ತರಲು ಸಿದ್ಧ ಎಂದು ಸಚಿವರು ಭರವಸೆ ನೀಡಿದರು.
ಮರಾಠಾ ಸಮಾಜವನ್ನು 2ಎ ಗೆ ಸೇರಿಸಬೇಕೆಂಬುದು ಸಮಾಜದ ಹಲವು ದಶಕಗಳ ಬೇಡಿಕೆಯಾಗಿದೆ. ಈ ದಿಶೆಯಲ್ಲಿ ಸೂಕ್ತ ಕ್ರಮ ಜರುಗಿದಬೇಕೆಂದು ಮುಖ್ಯಮಂತ್ರಿಯವರಿಗೆ ಅನೇಕ ಬಾರಿ ಮನವಿ ಮಾಡಿದ್ದೇನೆ. ನನ್ನ ಹಂತದಲ್ಲಿ ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಈ ವಿಷಯದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ. ಹಾಗೆಯೇ ಮರಾಠಾ ಸಮಾಜದ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಾ ಬಂದಿದ್ದು, ತಮ್ಮ ಬೇಡಿಕೆಗಳನ್ನು ಆದ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು. ಮರಾಠಾ ಬಾಂಧವರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಹಿಂದೆಂದಿಗಿಂತಲೂ ಉತ್ತಮ ಹೆಜ್ಜೆಯನ್ನಿಟ್ಟಿದೆ. ಮರಾಠಾ ಸಮಾಜದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಅನುಕೂಲವಾಗಬೇಕೆಂದು ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ನಿಗಮವನ್ನು ರಚಿಸಿ ಅಗತ್ಯ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ನಾನು ಜನತೆಯ ಸೇವಕನಾಗಿದ್ದು ಕ್ಷೇತ್ರದ ಜನತೆಗೆ ನ್ಯಾಯ ಸಿಗಬೇಕು, ಶಾಂತಿಯುತ ಜೀವನ ಸಾಗಿಸಬೇಕೆಂಬ ಸದುದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ದಿಶೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
ನಾರಾಯಣ ಗಣೇಶ ಮಾತನಾಡಿ, ಸಚಿವರು ಮರಾಠಾ ಸಮಾಜದ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಮರಾಠಾ ಭವನ ನಿರ್ಮಾಣಕ್ಕಾಗಿ ತಮ್ಮ ಸ್ವಂತ ಜಮೀನಿನಲ್ಲಿ ಒಂದು ಎಕರೆ ಜಮೀನು ನೀಡಿದಲ್ಲದೇ ಎರಡು ಕೋಟಿ ಅನುದಾನ ಒದಗಿಸಿದ್ದಾರೆ ಎಂದರು.
ಶಿವಾಜಿ ಪಾಟೀಲ ಮುಂಗನಾಳ ಅವರು ವಿವಿಧ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಅಂಬಿಕಾ ಕೇರಬಾ ಪವಾರ, ಉಪಾಧ್ಯಕ್ಷ ಸಂತೋಷ ಪೋಕಲವಾರ, ಮುಖಂಡರಾದ ಸುರೇಶ ಭೋಸ್ಲೆ, ಸತೀಶ ಪಾಟೀಲ ದಾಬಕಾ, ರಮೇಶ ಉಪಾಸೆ, ರಂಗರಾವ ಜಾಧವ, ದೊಂಡಿಬಾ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.