ಔರಾದ: ಏಕತಾ ಫೌಂಡೇಶನ್ ಔರಾದ ವತಿಯಿಂದ ಪಟ್ಟಣದ ಅಮರೇಶ್ವರ ಕಾಲೇಜು ಆವರಣದಲ್ಲಿ ಫೆಬ್ರುವರಿ 25 ರಂದು ಸಾಯಂಕಾಲ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಭವ್ಯ ಏಕತಾ ಉತ್ಸವ ಜರುಗಲಿದೆ. ಆದ್ದರಿಂದ ಔರಾದ ಹಾಗೂ ಕಮಲನಗರ ತಾಲೂಕಿನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಮತ, ಪಂಥ, ವರ್ಗ ಹಾಗೂ ಪಕ್ಷ ಭೇದವಿಲ್ಲದೆ ಏಕತಾ ಉತ್ಸವ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಜರುಗಲಿದೆ. ಏಕತಾ ಫೌಂಡೇಶನ್ ತಾಲೂಕಿನಲ್ಲಿ ಮಾಡುತ್ತಿರುವ ಕಾರ್ಯವೈಖರಿ ಹಾಗೂ ಜಾಗೃತಿ ಕಾರ್ಯಕ್ರಮಗಳ ಕುರಿತು ತಿಳಿಸುವ ಕಾರ್ಯ ಇದಾಗಿದೆ ಎಂದು ತಿಳಿಸಿದರು. ಸುಮಾರು 5 ಸಾವಿರ ಪಾಸ್ ವ್ಯವಸ್ಥೆ ಮಾಡಲಾಗಿದೆ. ಔರಾದ ಜನತೆ ಫೆ 24 ಒಳಗಾಗಿ 97426 75444 ನಂಬರ್ ಗೆ ಕಾಲ್ ಮಾಡಿ ಪಾಸ್ ಪಡೆಯಬಹುದು. ಉತ್ಸವದಲ್ಲಿ ಭಾಗವಹಿಸುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಏಕತಾ ಉತ್ಸವಕ್ಕೆ ವಿವಿಧ ಸುಪ್ರಸಿದ್ಧ ಕಲಾವಿದರು ಭಾಗಿ:
ಏಕತಾ ಉತ್ಸವದಲ್ಲಿ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಸುಪ್ರಸಿದ್ಧ ಗಾಯಕ ಖಾಸಿಂ ಅಲಿ ಆಗಮಿಸುತ್ತಿದ್ದು, ಆಕರ್ಷಕವಾಗಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ಇವರ ಜೊತೆಗೆ ಖ್ಯಾತ ಗಾಯಕರಾದ ಅನಿತಾ ಅಯ್ಯರ್, ಸ್ವಾತಿ, ಕನ್ನಡ ಕೋಗಿಲೆ ಖ್ಯಾತಿಯ ಸಾಗರ ಹಾಗೂ ಖ್ಯಾತ ನಿರೂಪಕಿ ಸೋನು ಮಂಗಳೂರು ಕೂಡಾ ಆಗಮಿಸಿ ಗಾಯನ ನಡೆಸಿಕೊಡಲಿದ್ದಾರೆ.
ಅಲ್ಲದೇ ವಿವಿಧ ರಾಜ್ಯಗಳ ನೃತ್ಯ ತಂಡದವರು ಆಗಮಿಸಿ ತಮ್ಮ ಅತ್ಯದ್ಭುತ ಕಲೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ. ಆದ್ದರಿಂದ ತಾಲೂಕಿನ ಜನತೆ ತಪ್ಪದೇ ಏಕತಾ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಗೋರ್ ಸೇನಾ ರಾಜ್ಯಾಧ್ಯಕ್ಷ ಬಾಳು ರಾಠೋಡ್, ಕುಮಾರ್ ದೇಶಮುಖ್, ಪ್ರವೀಣ, ವಿನೋದ ಸ್ವಾಮಿ, ಅಮರ್ ಸ್ವಾಮಿ, ಪ್ರಭುಲಿಂಗ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.