ಔರಾದ: ಜಂಗಮ ವಿರಾಟ ಸಮಾವೇಶವನ್ನು ಫೆ. 26ರಂದು ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಣೆಗಾಂವ ಶ್ರೀಮಠದ ಪೂಜ್ಯ ಶಂಕರಲಿಂಗ ಶಿವಾಚಾರ್ಯರು ನುಡಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಂಗಮ ವಿರಾಟ ಸಮಾವೇಶ ಕುರಿತು ಮಂಗಳವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಂಗಮ ಸಮಾಜವನ್ನು ಸಂಪೂರ್ಣವಾಗಿ ಸಂಸ್ಕಾರಿಕ, ವೈದಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಬಲಾಡ್ಯಗೊಳಿಸುವ ಹಾಗೂ ಮುಂಬರುವ ವಿಧಾನ ಸಭೆ, ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಸಮಾಜದ ಬೃಹತ್ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಈ ಭವ್ಯ ಸಮಾವೇಶ ಆಯೋಜಿಸಲಾಗಿದೆ.
ಕಾರಣ ಈ ಬೃಹತ್ ವಿರಾಟ ಸಮಾವೇಶಕ್ಕೆ ಸಮಸ್ತ ಜಂಗಮ ಸಮಾಜ ಬಾಂಧವರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಶಕ್ತಿ ಪ್ರದರ್ಶನಕ್ಕೆ ಮುಂದಾಗುವಂತೆ ಎಂದು ಮನವಿ ಮಾಡಿದರು. ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶಿವಲಿಂಗ ಶಿವಾಚಾರ್ಯರು ಹಾಗೂ ಮೆಹಕ, ತಡೋಳಾ ಹಾಗೂ ಡೋಣಗಾಪುರ ಶ್ರೀಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಅಂದೋಲಾ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಮಾವೇಶ ಕುರಿತು ವಿರಾಟ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಶಿವಣಿ ಶ್ರೀಮಠದ ಪೂಜ್ಯ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಅಂದು ಬೆಳಗ್ಗೆ ಅಮರೇಶ್ವರ ದೇವಸ್ಥಾನದಿಂದ ಗುರುಪಾದಪ್ಪ ಕಲ್ಯಾಣ ಮಂಟಪದವರೆಗೆ ಅದ್ದೂರಿಯಾಗಿ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ10 ಕಲಾವಿದರ ತಂಡ ಭಾಗವಹಿಸಲಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಲಿದ್ದಾರೆ. ಜಂಗಮ ವಿರಾಟ ಸಮಾವೇಶದಲ್ಲಿ ಸುಮಾರು 6ರಿಂದ 8 ಸಾವಿರ ಜಂಗಮರು ಭಾಗವಹಿಸಲಿದ್ದಾರೆ. ಎಲ್ಲಾ ಜಂಗಮ ಬಾಂಧವರು ತಮ್ಮ ವೇಷ ಭೂಷಣದಲ್ಲಿ ಸಮಾವೇಶಕ್ಕೆ ಆಗಮಿಸಬೇಕು ಎಂದು ಹೇಳಿದರು.
ಡೋಣಗಾಂವ ಹಾವಗಿ ಸ್ವಾಮಿ ಮಠದ ಪೂಜ್ಯ ಡಾ.ಶಂಭಲಿಂಗ ಶಿವಾಚಾರ್ಯರು, ಠಾಣಾಕುಶನುರ ಶ್ರೀಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ಸೇನಾಳ ಶ್ರೀಮಠದ ಪೂಜ್ಯ ಚನ್ನವೀರ ಮಹಾಸ್ವಾಮಿಗಳು, ಮುಧೋಳ(ಬಿ) ಶ್ರೀ ಮಠದ ಪೂಜ್ಯ ಶಿವಲಿಂಗ ಶಿವಾಚಾರ್ಯರು, ಗುಡಹಳ್ಳಿ ಶ್ರೀಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು ಹಾಗೂ ಕಳಾಸ ಶ್ರೀಮಠದ ಪೂಜ್ಯ ಬಸವಲಿಂಗ ಶಿವಾಚಾರ್ಯರು ಸಮುಖದಲ್ಲಿ ಜಂಗಮ ಬಾಂಧವರ ಈ ಬೃಹತ್ ಸಮಾವೇಶ ಹಾಗೂ ಶಕ್ತಿ ಪ್ರದರ್ಶನ ಜರುಗಲಿದೆ. ಈ ಸಂದರ್ಭದಲ್ಲಿ ಹಲಬರ್ಗಾ ಹಾಗೂ ಶಿವಣಿ ಶ್ರೀಮಠದ ಪೂಜ್ಯ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಕೌಳಾಸ ಶ್ರೀಮಠದ ಪೂಜ್ಯ ಬಸವಲಿಂಗ ಶಿವಾಚಾರ್ಯರು ಹಾಗೂ ಜಂಗಮ ಬಾಂಧವರು ಹಾಜರಿದ್ದರು.