ಔರಾದ: ಸರ್ಕಾರಕ್ಕೆ ಚುರುಕು ಮುಟ್ಟುವ ಹಾಗೆ ಎಲ್ಲಾ ಜಂಗಮರು ಸಂಘಟಿತರಾಗಿ ನಿತ್ಯ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಮೆಹಕರ್ ಕಟ್ಟಿಮನಿ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ನಡೆದ ಜಂಗಮ ವಿರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 242 ದಿನಗಳಿಂದ ಸತ್ಯಾಗ್ರಹ ನಡೆಯುತ್ತಿದ್ದರೂ ಸರ್ಕಾರ ಜಂಗಮರ ಬೇಡಿಕೆಗೆ ಸ್ಪಂದಿಸದೇ ಇರುವುದಕ್ಕೆ ಅಸಮಾಧಾನ ಹೊರ ಹಾಕಿದರು. ಬೇಡಿ ಕೊಡದಿದ್ದರೆ ಕಸಿದುಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹೋರಾಟ ಮಾಡಲು ಸಮಾಜ ಬಾಂಧವರು ಸಿದ್ಧರಾಗಬೇಕಿದೆ ಎಂದು ಸಲಹೆ ನೀಡಿದರು.
ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು ಮಾತನಾಡಿ, ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡುವುದು ಸರ್ಕಾರ ನೀಡುವ ಭಿಕ್ಷೆ ಅಲ್ಲ ಹಕ್ಕು. ಜಂಗಮರಿಗೆ ಈ ಸೌಲಭ್ಯ ಕೊಡುವುದರಿಂದ ಎಲ್ಲಿ ತಮಗೆ ತೊಂದರೆಯಾಗುತ್ತದೆ ಎಂಬ ಭಯದಿಂದಾಗಿ ಕೆಲ ರಾಜಕಾರಣಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಜಂಗಮ ಸಮಾಜದ ಮುಖಂಡ ಬಸವರಾಜ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜಂಗಮ ಸಮಾಜದ 40 ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದರೆ ನಾವು ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಮಾತನಾಡಿ, ನಾನು 10 ವರ್ಷಗಳ ಕಾಲ ಹೋರಾಟ ಮಾಡಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನಗೆ ಎಲ್ಲ ಸಮಾಜ ಬಾಂಧವರ ಆಶೀರ್ವಾದ ಇದೆ. ಪ್ರಭು ಚವಾಣ್ ಅವರು ಕಳೆದ 15 ವರ್ಷಗಳಿಂದ ಇಲ್ಲಿಯ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಬೇಕಿದೆ ಎಂದರು.
ಹೆಡಗಾಪುರ ಶಿವಲಿಂಗ ಶಿವಾಚಾರ್ಯರು, ಠಾಣಾಕುಶನೂರ ಸಿದ್ಧಲಿಂಗ ಸ್ವಾಮೀಜಿ, ಗುಡಪಳ್ಳಿಯ ಚಂದ್ರಶೇಖರ ಶಿವಾಚಾರ್ಯರು, ಹಾವಗಿಲಿಂಗ ಶಿವಾಚಾರ್ಯರು, ಬಸವಲಿಂಗ ಶಿವಾಚಾರ್ಯರು, ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಶಿವಯ್ಯ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಗುಂಡಯ್ಯ ಸ್ವಾಮಿ, ನೆಹರೂ ಸ್ವಾಮಿ, ಶಿವಕಾಂತ ಸ್ವಾಮಿ, ದಯಾನಂದ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಗಂಗಾಧರ ಸ್ವಾಮಿ, ಸಚ್ಚಿದಾನಂದ ಸ್ವಾಮಿ, ಅಮರ ಸ್ವಾಮಿ ಸೇರಿದಂತೆ ಜಂಗಮ ಸಮಾಜದ ಪ್ರಮುಖರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಮರೇಶ್ವರ ದೇವಸ್ಥಾನದಿಂದ ಸಮಾವೇಶ ನಡೆಯುವ ನಾಗಮಾರಪಳ್ಳಿ ಕಲ್ಯಾಣ ಮಂಟಪದವರೆಗೆ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಮಠದ ಸ್ವಾಮೀಜಿ ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಜಂಗಮ ಸಮಾಜ ಬಾಂಧವರು ಪಾಲ್ಗೊಂಡರು.