ಔರಾದ: ಕೂಡಲಸಂಗಮದಲ್ಲಿ ಜನವರಿ 12ರಿಂದ 14ರವರೆಗೆ ನಡೆಯಲಿರುವ 36ನೇ ಶರಣ ಮೇಳದಲ್ಲಿ ಎಲ್ಲ ಬಸವ ಭಕ್ತರು ಭಾಗವಹಿಸಬೇಕು ಎಂದು ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ಶಿವಶರಣಪ್ಪ ವಲ್ಲೇಪುರೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, 1988ರಲ್ಲಿ ಶರಣ ಮೇಳ ಆರಂಭವಾಗಿದ್ದು, ನೆರೆಯ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳದ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದಾರೆ. ಲಿಂಗಾಯತ ಧರ್ಮ ಸಂಸ್ಥಾಪಕ, ವಿಶ್ವಗುರು ಬಸವಣ್ಣನವರ ಕಾರಣ ಕತ್ವ ಮತ್ತು ಸಂದೇಶದಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು ವರ್ಷಕ್ಕೆ ಒಮ್ಮೆಯಾದರೂ ಸಮಾವೇಶವಾಗುವುದು ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ಶರಣ ಸಂಕಲ್ಪದಂತೆ ಜಾತಿ ವರ್ಣ, ವರ್ಗ ಬೇಧವಿಲ್ಲದಂತೆ ನಡೆಯುವ ಶರಣ ಮೇಳ ಇದಾಗಿದೆ.ಜ. 12ರಂದು ಸಚಿವ ಪ್ರಭು ಚವ್ಹಾಣ ಅವರು ಶರಣ ಮೇಳ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಫಾರ್ಮಹೌಸ್ ಲೋಕಾರ್ಪಣೆ ಮಾಡಲಿದ್ದಾರೆ. ಆದ್ದರಿಂದ ತಾಲೂಕಿನ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶರಣ ಮೇಳದಲ್ಲಿ ಭಾಗವಹಿಸಬೇಕು ಎಂದು ವಲ್ಲೇಪುರೆ ಮನವಿ ಮಾಡಿಕೊಂಡಿದ್ದಾರೆ.