ಔರಾದ: ವಿದ್ಯಾರ್ಥಿಗಳು ಪರೀಕ್ಷಾ ಭಯ ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಪಿಡಿಒ ವಿಜಯಲಕ್ಷ್ಮಿ ಪಾಟೀಲ ಸಲಹೆ ನೀಡಿದರು.
ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕ್ಲಸ್ಟರ್ ಮಟ್ಟದ ರಾಷ್ಟ್ರೀಯ ವಿಜ್ಞಾನ ದಿನ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊದಲು ಪರೀಕ್ಷಾ ಭಯದಿಂದ ಹೊರ ಬರಬೇಕು. ಆತ್ಮವಿಶ್ವಾಸದಿಂದ ಪಾಠ ಪ್ರವಚನಗಳು ಓದಿಕೊಂಡು ಮನನ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರಿಂದ ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ-ಬರೆದು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಿದ್ಧರಾಗಬೇಕು ಎಂದರು.
ಸಂಪನ್ಮೂಲ ಶಿಕ್ಷಕ ಮೌನೇಶ ಪತ್ತಾರ್ ಮಾತನಾಡಿ, ಉತ್ತಮ ಜ್ಞಾನ ಹೊಂದಿದ್ದರೂ ಸಹ ವಿದ್ಯಾರ್ಥಿಗಳು ಭಯದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಯಾರು ಭಯ ಬಿಟ್ಟು ಪರೀಕ್ಷೆ ಬರೆಯುತ್ತಾರೋ ಅವರು ಯಶಸ್ಸು ಪಡೆಯುತ್ತಾರೆ. ಪರೀಕ್ಷಾ ಸಮಯದಲ್ಲಿ ಟಿವಿ, ಮೊಬೈಲ್‍ಗಳಿಂದ ದೂರವಿರಬೇಕು. ಅಗತ್ಯವಿದ್ದರೆ ಪತ್ರಿಕೆಗಳನ್ನು ಓದಬೇಕು ಎಂದು ಕಿವಿಮಾತು ಹೇಳಿದರು.
ಗಣಿತ ಪರೀಕ್ಷೆಯಲ್ಲಿ ಮಿಂಚಿದ ಎಕಲಾರ ಮಕ್ಕಳು :
ಗ್ರಾ.ಪಂ ಮಟ್ಟದಲ್ಲಿ ಆಯೋಜಿಸಿದ ಗಣಿತ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಎಕಲಾರ ಶಾಲೆಯ ಮಕ್ಕಳು ಹೆಚ್ಚಿನ ಬಹುಮಾನ ಪಡೆದು ಮಿಂಚಿದರು. ಇದೇ ಸಂದರ್ಭದಲ್ಲಿ ಕ್ಲಸ್ಟರ್‌ನ ಎಲ್ಲ ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಕಿಟ್ ವಿತರಿಸಲಾಯಿತು. ನಂತರ ಕ್ಲಸ್ಟರ್ ನ ಅತಿಥಿ ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸಮೃತರಾವ ಪಾಟೀಲ, ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪೂರೆ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜ್ಞಾನದೇವ ಪಾಂಚಾಳ, ಸುರೇಶ ಪಾಂಡ್ರೆ, ಪ್ರಭು ಬಾಳೂರೆ, ಸಿಆರ್‌ಪಿ ಮಹಾದೇವ ಘುಳೆ, ಗಜಾನನ ಮಳ್ಳಾ, ಕಲ್ಲಪ್ಪ ಚಳಕಾಪೂರೆ, ದತ್ತಾತ್ರಿ ಪಾಟೀಲ, ಬಾಲಾಜಿ ಅಮರವಾಡಿ, ಕಲ್ಲಪ್ಪ, ಅಂಜಾರೆಡ್ಡಿ, ಸತೀಶ ಮಜಗೆ, ಶರಣಪ್ಪ, ಜ್ಯೋತಿ, ಜಯಮಾಲಾ, ಧರ್ಮಪ್ರೀಯಾ, ಕಲ್ಪನಾ, ನಿರ್ಮಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.