ಔರಾದ: ವಿದ್ಯಾರ್ಥಿಗಳ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಲಿದೆ ಎಂದು ಯಾದಗೀರ ಸಹಾಯಕ ಆಯುಕ್ತ ಖಾಜಾ ಖಲೀಲುಲ್ಲಾ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಔರಾದ(ಬಿ), ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಹಳೆ ವಿದ್ಯಾರ್ಥಿಗಳ ಬಳಗದಿಂದ ಬುಧವಾರ ವಡಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳು ಮಕ್ಕಳನ್ನು ಕ್ರಿಯಾಶೀಲಗೊಳಿಸಲು ಸಹಕಾರಿಯಾಗಿವೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡುವುದರ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಡಯಟ್ ಕಾಲೇಜಿನ ಉಪನ್ಯಾಸಕ ಶಿವಶಂಕರ ಸ್ವಾಮಿ ಮಾತನಾಡಿ, ಕಲಿಕೆ ಅತ್ಯಂತ ಶ್ರೇಷ್ಠ ವಾಗಿದ್ದು, ಮಕ್ಕಳಲ್ಲಿ ಕಲಿಯುವ ಛಲ ಇರಬೇಕು. ಶಿಕ್ಷಕರು ಹಳೆ ವಿದ್ಯಾರ್ಥಿ ಬಳಗದವರ ಸಹಕಾರ ಪಡೆದು ಶಾಲೆಯ ಸುಂದರಿಕಾರಣಕ್ಕಾಗಿ, ಏಳಿಗೆಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು. ವಡಗಾಂವ ಕ್ಲಸ್ಟರ್‌ನ 20 ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಬೆಳಗ್ಗೆ 9 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳ ರ್ಯಾಲಿ ನಡೆಯಿತು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಸರ್ಕಾರಿ ಕನ್ಯಾ ಪ್ರೌಢಶಾಲೆಯ ಬಾಲಕಿಯರು ಮಾಡಿದ ಕಾಂತಾರ ಚಲನಚಿತ್ರದ ಹಾಡಿನ ನೃತ್ಯವು ಮೆರವಣಿಗೆಯ ಮೆರಗು ಹೆಚ್ಚಿಸಿದರ ಜೊತೆಗೆ ನೋಡುಗರ ಕಣ್ಮಣೆ ಸೆಳೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಸುದ್ ಅಹಮ್ಮದ್, ಡಯಟ್ ಉಪನ್ಯಾಸಕ ಶಿವಶಂಕರ ಸ್ವಾಮಿ, ಔರಾದ ಸಹಾಯಕ ನಿರ್ದೇಶಕ ರತಿಕಾಂತ ನೆಳಗೆ, ಮುಖ್ಯಗುರುಗಳಾದ ಮಚೆಂದರ್ ಗಾಯಕವಾಡ, ಪ್ರೆಮಕುಮಾರ್, ಪಿಡಿಓ ವಿನೋದ್ ಕುಮಾರ ಕುಲಕರ್ಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಗದೀಶ್ ನಿಂಬುರೆ, ವಡಗಾಂವ ಸಂಪನ್ಮೂಲ ವ್ಯಕ್ತಿ ರವೀಂದ್ರ ಡಿಗ್ಗಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರಯ್ಯ ಗುಮ್ಮೆ, ರಾಜಕುಮಾರ ಲೆಂಡಧರೆ, ಹನಮಂತ ನೆಳಗೆ, ಗ್ರಾಪಂ ಅಧ್ಯಕ್ಷೆ ಸವಿತಾ ಚೌವ್ಹಾಣ, ಗ್ರಾಪಂ ಸದಸ್ಯರಾದ ರಾಜಕುಮಾರ ಹೇಡೆ, ರವಿ ಗಂಗಾ, ಸಂಗಮೇಶ ಕಲ್ಲಾ, ಓಂಕಾರ ಮೇತ್ರೆ, ಹಾವಗಿರಾವ್ ನೆಳಗೆ, ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳು ಸೇರಿದಂತೆ ಹಳೆವಿದ್ಯಾರ್ಥಿ ಬಳಗದ ಸದಸ್ಯರು ಹಾಜರಿದ್ದರು.