ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು.
ಮುತಖೇಡ್, ಕಿಶನನಾಯಕ್ ತಾಂಡಾ, ದಾಬಕಾ, ಗಂಗನಬೀಡ, ಪೋಮಾ ನಾಯಕ್ ತಾಂಡಾ, ತೇಜಾನಾಯಕ್ ತಾಂಡಾ, ಅಕನಾಪೂರ, ಗಣೇಶಪೂರ(ಯು), ಗೇಮಾ ತಾಂಡಾ, ವಾಗನಗೇರಾ, ಸಂಗನಾಳ, ಕರ್ಕ್ಯಾಳ, ಖಂಡಿಕೇರಿ, ಭೀಮ್ಲಾ ತಾಂಡಾ, ಕೇವಳಾ ತಾಂಡಾ, ನಿಡೋದಾ, ಠಾಣಾಕುಶನೂರ, ಹಿಪ್ಪಳಗಾಂವ, ಮಹಾಡೋಣಗಾಂವ, ಎಂ.ಜಿ ತಾಂಡಾ, ರಮಣ ತಾಂಡಾದಲ್ಲಿ ಸಂಚರಿಸಿದರು.
ಹಾಗೆಯೇ ಬನ್ಸಿ ತಾಂಡಾ, ಪಾಂಡು ತಾಂಡಾ, ಭೋಜು ತಾಂಡಾ, ರಾಮಾ ತಾಂಡಾ, ಮಾನ್ಸಿಂಗ್ ತಾಂಡಾ, ಕಿಶನ ತಾಂಡಾ, ಫೂಲಸಿಂಗ್ ತಾಂಡಾ, ಗೋವಿಂದ ತಾಂಡಾ ಸೇರಿದಂತೆ ಸುಮಾರು 30 ಗ್ರಾಮಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ಮುಂಚೆ ಔರಾದ(ಬಿ) ಕ್ಷೇತ್ರ ಸಾಕಷ್ಟು ಹಿಂದುಳಿದಿತ್ತು. ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಒಳಗೊಂಡು ಯಾವುದೇ ರೀತಿಯ ಸೌಕರ್ಯಗಳಿಲ್ಲದೆ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ನಾನು ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲು ಶಾಸಕನಾಗಿ ಸೇವೆ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ವಿನಂತಿಸಿದರು.
ಸರ್ಕಾರದ ಯೋಜನೆಗಳು ಅರ್ಹ ವ್ಯಕ್ತಿಗೆ ತಲುಪಬೇಕು. ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು. ಕ್ಷೇತ್ರದ ಪ್ರತಿಯೊಂದು ಹಳ್ಳಿಯೂ ಅಭಿವೃದ್ಧಿ ಆಗಬೇಕೆಂಬುದು ನನ್ನ ಅಭಿಲಾಶೆಯಾಗಿದೆ. ಜನತೆಯ ಆಶೀರ್ವಾದದಿಂದ ಸಿಕ್ಕ ಅವಕಾಶವನ್ನು ಜನಕಲ್ಯಾಣಕ್ಕಾಗಿ ಉಪಯೋಗಿಸಿದ್ದೇನೆ. ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕುಗಳನ್ನು ನಂ.1 ಮಾಡುವ ಉದ್ದೇಶದಿಂದ ಮಹಾಜನತೆಯ ಬಯಕೆಯಂತೆ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ದಾಖಲೆಯ ಪ್ರಮಾಣದ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.