ಔರಾದ: ಸಚಿವ ಪ್ರಭು ಚವ್ಹಾಣ ಅವರು ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಕಮಲನಗರ ತಾಲ್ಲೂಕಿನ ಹಕ್ಯಾಳ ಗ್ರಾಮದ ಬೂತ್ ಅಧ್ಯಕ್ಷರಾದ ಅನೀಲ ಬಿರಾದಾರ ಅವರ ಮನೆಯಲ್ಲಿ ಭಾರತ ಮಾತೆ, ಪಂಡಿತ್ ದೀನದಯಾಳ ಉಪಾಧ್ಯಾಯ ಹಾಗೂ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಶಿವಪುರ ಗ್ರಾಮದ ಕಾರ್ಯಕರ್ತರ ಮನೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರ ನೇರ ಪ್ರಸಾರ ಕಾರ್ಯಕ್ರಮವನ್ನು ಕಾರ್ಯಕರ್ತರೊಂದಿಗೆ ಕುಳಿತು ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಇಡೀ ವಿಶ್ವದಲ್ಲಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. ಈ ಪಕ್ಷ ಹೆಮ್ಮರವಾಗಿ ಬೆಳೆಯಲು ಹಲವು ಮಹನೀಯರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ಮತ್ತು ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಇಲ್ಲಿ ಕಾರ್ಯಕರ್ತರಿಗೆ ಮೇರು ಸ್ಥಾನವಿದೆ. ಸಾಮಾನ್ಯ ಕಾರ್ಯಕರ್ತ ನಾಯಕನಾಗಿ ಬೆಳೆಯಲು ಬಿಜೆಪಿಯಲ್ಲಿ ಮಾತ್ರ ಅವಕಾಶವಿದೆ. ಅಂತಹ ಪಕ್ಷದಲ್ಲಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಜೀವ ಮುರ್ಕೆ, ಅನೀಲ ಚಿಮ್ಮೆಗಾಂವ, ಖಂಡೋಬಾ ಕಂಗಟೆ, ನಾಗೇಶ ಪತ್ರೆ, ಪ್ರತೀಕ್ ಚವ್ಹಾಣ, ಸಚಿನ ರಾಠೋಡ, ಪ್ರದೀಪ ಪವಾರ, ಉದಯ ಸೊಲ್ಲಾಪೂರೆ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.